ಸಾಗರ | ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ ಎಂದು ಸುಳ್ಳು ಆರೋಪ; ಮುಖ್ಯ ಶಿಕ್ಷಕರ ಪರ ನಿಂತ ಗ್ರಾಮಸ್ಥರು

ಡಿಡಿಪಿಐಗೆ ದಿಗ್ಬಂಧನ; ಆರೋಪ ಮಾಡಿದವರ ವಿರುದ್ಧ ಕ್ರಮಕ್ಕೆ ಪೋಷಕರ ಪಟ್ಟು

Update: 2022-12-21 15:43 GMT

ಸಾಗರ: ಸಾಮಾಜಿಕ ಜಾಲತಾಣದಲ್ಲಿ ತಾಲೂಕಿನ ಆವಿನಹಳ್ಳಿ ಸಮೀಪದ, ಕಲ್ಮನೆ ಗ್ರಾಮ ಪಂಚಾಯತ್  ವ್ಯಾಪ್ತಿಯ ಕಾಗೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಬಂದ ಜಿಲ್ಲಾ ಶಿಕ್ಷಣಾಧಿಕಾರಿಗೆ ದಿಗ್ಬಂಧನ ಹಾಕಿರುವ ಕಾಗೆಹಳ್ಳದ ಜನರು, ದೂರುದಾರನನ್ನು ಸ್ಥಳಕ್ಕೆ ಕರೆಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಮುಖ್ಯಶಿಕ್ಷಕ ರಫೀಕ್ ಅಹ್ಮದ್ ಅವರು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಪ್ರಕಟವಾಗಿತ್ತು. ಆದರೆ ಮುಖ್ಯ ಶಿಕ್ಷಕರು ಯಾವ ಮಕ್ಕಳಿಗೂ ಕಿರುಕುಳ ಕೊಟ್ಟಿಲ್ಲ. ಇಂತಹ ಸುದ್ದಿ ಪ್ರಸಾರ ಮಾಡುವ ಮೂಲಕ ನಮಗೆ ಹಾಗೂ ನಮ್ಮ ಮಕ್ಕಳಿಗೆ ಮಾನಹಾನಿ ಮಾಡಲಾಗುತ್ತಿದೆ. ಇಂತಹ ಸುಳ್ಳು ಸುದ್ದಿ ಸಿದ್ಧಪಡಿಸಿ ಆರೋಪ ಮಾಡಿದವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು ಎಂದು ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರು ಆಗ್ರಹ ಮಾಡಿದರು.

ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿ.ಆರ್.ಪರಮೇಶ್ವರಪ್ಪ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದ ಸಂದರ್ಭದಲ್ಲಿ ದೂರು ನೀಡಿದವರನ್ನು ಕರೆಯಿಸಬೇಕೆಂದು ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ದೂರುದಾರರು ಬರುವ ತನಕ ಡಿಡಿಪಿಐ ಅವರನ್ನು ಹೊರ ಕಳುಹಿಸಲ್ಲ ಎಂದು ಘೋಷಿಸಿರುವ ಪೋಷಕರು, ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಗೇಟಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. 

Similar News