ಅಧಿಕ ಬಡ್ಡಿ ವಿಧಿಸುವವರ ವಿರುದ್ಧ ಪೊಲೀಸರು ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಳ್ಳುವಂತಿಲ್ಲ: ಹೈಕೋರ್ಟ್
ಬೆಂಗಳೂರು, ಡಿ.21: ಹೆಚ್ಚಿನ ಬಡ್ಡಿ ವಿಧಿಸುವವರ ವಿರುದ್ಧ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಳ್ಳುವುದಕ್ಕೆ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಗೋಕಾಕ್ ನಗರ ಪೊಲೀಸ್ ಠಾಣಾಧಿಕಾರಿಗಳ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿದ್ದ ಕ್ರಮ ಪ್ರಶ್ನಿಸಿ ಗೋಕಾಕ್‍ನ ಬಸವರಾಜ ಮತ್ತು ಜಾಕೀರ್ ಹುಸೈನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಆರೋಪ ಸಂಬಂಧ ದಾಖಲಾಗಿದ್ದ ಎಫ್‍ಐಆರ್ ಮತ್ತು ಆರೋಪ ಪಟ್ಟಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಲೇವಾದೇವಿ ಕಾಯ್ದೆಯಲ್ಲಿ ಉಲ್ಲೇಖಿಸಿರುವಂತೆ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು ಹಾಗೂ ಸರಕಾರ ನಿಯೋಜಿಸಿದ ಅಧಿಕಾರಿಗಳು ಮಾತ್ರ ಹೆಚ್ಚಿನ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ದಾಳಿ ಮಾಡಬಹುದು ಎಂದು ತಿಳಿಸಿದೆ. ಈ ರೀತಿಯ ಪ್ರಕರಣಗಳಲ್ಲಿನ ಸಂತ್ರಸ್ತರು ತಮ್ಮ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಆರೋಪಿಗಳು ಸರಕಾರದಿಂದ ಯಾವುದೇ ಅನುಮತಿ ಪಡೆಯದೇ ಮಾಸಿಕ 10ರಷ್ಟು ಬಡ್ಡಿ ಪಡೆಯುತ್ತಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಇದು ಕಾನೂನು ಬಾಹಿರವಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪ ಪಟ್ಟಿಯನ್ನು ಪರಿಶೀಲಿಸಿದ ಬಳಿಕ ಸೂಕ್ರ ಕ್ರಮ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು ಎಂದು ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಪ್ರಕರಣ ರದ್ದು ಪಡಿಸಿ ಆದೇಶಿಸಿದೆ.