'ನಮ್ಮಿಬ್ಬರಿಗೂ ಸಚಿವ ಸ್ಥಾನ ಫಿಕ್ಸ್...': ಸಿಎಂ ಭೇಟಿಯಾದ ಈಶ್ವರಪ್ಪ, ರಮೇಶ್ ಜಾರಕಿಹೊಳಿ

Update: 2022-12-21 17:52 GMT

ಬೆಂಗಳೂರು, ಡಿ. 21; ಮಾಜಿ ಸಚಿವರು ಹಾಗೂ ಬಿಜೆಪಿ ಹಿರಿಯ ನಾಯಕರಾದ  ಕೆ. ಎಸ್.‌ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಇಬ್ಬರೂ ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಬುಧವಾರ ಬೆಳಗಾವಿಯ ವಿಟಿಯು ಕ್ಯಾಂಪಸ್‌ನಲ್ಲಿ ಉಭಯ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಸಿಎಂ ಜೊತೆ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, 'ಈ ಅಧಿವೇಶನದೊಳಗೆ ಸಿಎಂ ದೆಹಲಿಗೆ ಹೋಗಿ ಬರುತ್ತಾರೆ. ಹೈಕಮಾಂಡ್ ನಾಯಕರ ಜೊತೆ ಮಾತನಾಡಿದ ಬಳಿಕ ಸಂಪುಟ ವಿಸ್ತರಿಸುವುದಾಗಿ ಭರವಸೆ ನೀಡಿದ್ದಾರೆ. ನಮ್ಮದಂತೂ ಖಾತ್ರಿ ಇದೆ, ಇನ್ನು ಎಷ್ಟು ಜನರನ್ನು ಸಂಪುಟಕ್ಕೆ ಸೇರಿಸಬೇಕು  ಅನ್ನೋದು ನಿರ್ಧಾರ ಆಗಬೇಕಿದೆ' ಎಂದರು.

ಇನ್ನು ರಮೇಶ್ ಜಾರಕಿ ಹೊಳಿ ಮಾತನಾಡಿ, '' 2023ಕ್ಕೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ನಾಳೆಯಿಂದ ನಾನೊಬ್ಬನೇ ಅಲ್ಲ ಯೋಗೇಶ್ವರ್ ಕೂಡ ಅಧಿವೇಶನಕ್ಕೆ ಬರುತ್ತಾರೆ'' ಎಂದು ತಿಳಿಸಿದರು. 


 

Similar News