ಅಡಿಕೆ ಬೆಳೆ ಭವಿಷ್ಯ ಇನ್ನಷ್ಟು ಪಾತಾಳಕ್ಕೆ: ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

Update: 2022-12-21 18:56 GMT

ಬೆಳಗಾವಿ(ಸುವರ್ಣವಿಧಾನಸೌಧ), ಡಿ.21: ‘ಅಡಿಕೆ ಉತ್ಪನ್ನ ಕೇವಲ ಜಗಿದು ಉಗಿಯಲಿಕ್ಕಷ್ಟೆ ಉಪಯೋಗ. ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ರೈತರು ಅಡಿಕೆ ಬೆಳೆದು ಹೈರಾಣಾಗಿದ್ದಾರೆ.ಇದೀಗ ರಾಜ್ಯದ ಎಲ್ಲ ಕಡೆ ಹೊಸದಾಗಿ ಅಡಿಕೆ ಬೆಳೆಯಲು ಮುಂದಾಗುತ್ತಿದ್ದು, ಮುಂದೊಂದು ದಿನ ಅಡಿಕೆ ಬೆಲೆ ಮತ್ತಷ್ಟು ಕುಸಿತದಿಂದ ಅವರಿಗೆ ಮುಳುವಾಗಲಿದೆ’ ಎಂದು ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಉಮಾನಾಥ ಎ.ಕೋಟ್ಯಾನ್ ಕೇಳಿದ ಪ್ರಶ್ನೆಗೆ ತೋಟಗಾರಿಕೆ ಸಚಿವರ ಪರವಾಗಿ ಉತ್ತರ ನೀಡಿದ ಅವರು, ಅಡಿಕೆ ವಾಣಿಜ್ಯ ಬೆಳೆ ಎಂಬ ಕಾರಣಕ್ಕಾಗಿ ಎಲ್ಲ ರೈತರೂ ಬೆಳೆಯಲು ಮುಗಿಬೀಳುತ್ತಿದ್ದಾರೆ. ಹೀಗಾಗಿ ಆಹಾರದ ಬೆಳೆಗಳನ್ನು ಬೆಳೆಯುವವರೆ ಇಲ್ಲ. ಅಡಿಕೆ ಬೆಳೆಯನ್ನು ಬಯಲು ಸೀಮೆ ಸೇರಿದಂತೆ ಎಲ್ಲ ಕಡೆಗಳಲ್ಲಿ ವಿಸ್ತರಣೆ ಆಗುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಲಹೆ ನೀಡಿದರು.

ಪರಿಹಾರಕ್ಕೆ ಚಿಂತನೆ: ಅಡಿಕೆಗೆ ಎಲೆಚುಕ್ಕೆ ರೋಗ ಬಾಧೆ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ನೀಡಲು ಚಿಂತನೆ ನಡೆಸಲಾಗಿದೆ. ಜತೆಗೆತೋಟಗಾರಿಕೆಗೆ ಪ್ರೋತ್ಸಾಹ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಅವುಗಳಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನುಒದಗಿಸಲಾಗುವುದು ಎಂದು ಹೇಳಿದರು.

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿದ್ದು,ಇತ್ತೀಚೆಗೆ  ತಮ್ಮ ನೇತೃತ್ವದ ನಿಯೋಗ ಹೊಸದಿಲ್ಲಿಗೆ ತೆರಳಿ ಸಂಭಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಅದಾದ ಬಳಿಕ ಕೇಂದ್ರ ಸರಕಾರ, ರಾಜ್ಯಕ್ಕೆ ವಿಜ್ಞಾನಿಗಳ ನಿಯೋಗ  ಕಳುಹಿಸಿಕೊಟ್ಟಿದೆ. ನಿಯೋಗ ಬಂದು ವಸ್ತುಸ್ಥಿತಿ ಅಧ್ಯಯನ ನಡೆಸಿದೆ ಎಂದರು.

ಈ ಹಂತದಲ್ಲಿ ಎದ್ದು ನಿಂತ ಬಿಜೆಪಿ ಸದಸ್ಯ ಎಂ.ಪಿ.ಕುಮಾರಸ್ವಾಮಿ, ‘ಒಂದು ಅಡಿಕೆ ಮರ ಹಾಳಾದರೆ ಒಂದು ತಲೆಮಾರು ಹಾಳಾದಂತೆ ಎಂಬ ಮಾತಿದೆ.ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸರಕಾರ ಗಂಭೀರ ಪ್ರಯತ್ನ ಮಾಡಬೇಕು.ಜತೆಗೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ‘ಇದೊಂದು ಪಾರಂಪರಿಕ ಖಾಯಿಲೆಯಾಗಿದ್ದು, ನಮ್ಮಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳಿದ್ದರೂ ಈ ರೋಗಕ್ಕೆ ಔಷಧಿ ಕಂಡು ಹಿಡಿಯಲಾಗಲಿಲ್ಲ. ನಮ್ಮ ವಿಜ್ಞಾನಿಗಳು ಏನು ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸದಸ್ಯರಾದ ಸಿ.ಟಿ.ರವಿ, ಶಿವಾನಂದ ಪಾಟೀಲ್, ಎಚ್.ಡಿ.ರೇವಣ್ಣ, ಟಿ.ಡಿ.ರಾಜೇಗೌಡ, ಯು.ಟಿ.ಖಾದರ್ ಸೇರಿದಂತೆ ಹಲವು ಸದಸ್ಯರು, ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ.ಅವರ ನೆರವಿಗೆ ಸರಕಾರ ಕೂಡಲೇ ಮುಂದಾಗಬೇಕು ಎಂದು ಆಗ್ರಹಿಸಿದರು.

Full View

Similar News