ಮೈಸೂರು: ಶಾಸಕ ಸಿ.ಟಿ. ರವಿ ಭಾವಚಿತ್ರದ ಫ್ಲೆಕ್ಸ್ ಗೆ ಮದ್ಯ ಸುರಿದು, ಸೆಗಣಿ ಎರಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Update: 2022-12-22 14:30 GMT

ಮೈಸೂರು, ಡಿ. 22: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ. ರವಿ ಅವರ ಭಾವಚಿತ್ರ ಇರುವ ಫ್ಲೆಕ್ಸ್‍ಗೆ ಮದ್ಯ ಸುರಿದು, ಸೆಗಣಿ ಎರಚಿ ಪ್ರತಿಭಟನೆ ನಡೆಸಿದರು.

ನಗರದ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಿ.ಟಿ.ರವಿ ಅವರ ವಿರುದ್ಧ ಧಿಕ್ಕಾರ ಕೂಗಿದರು.

ಇದೇ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ , 'ಮಾತನಾಡಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಓರ್ವ ಲೂಟಿ, ಓಟಿ ರವಿ, ಈತ ರಮ್ಮು ವಿಸ್ಕಿ ಸೇವಿಸಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಈತ ಕಂಡ ಕಡೆಯಲ್ಲಿ ಅವನಿಗೆ ಸಗಣಿ ಹಾಕಿ ಮದ್ಯದ ಬಾಟಲಿಗಳನ್ನು ಎಸೆಯಿರಿ' ಎಂದು ಕರೆ ನೀಡಿದರು.

'ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ದೇಶಕ್ಕೆ ತ್ಯಾಗ ಮಾಡಿದ್ದಾರೆ. ಅವರ ಪತಿ ರಾಜೀವ್ ಗಾಂಧಿ ಅವರ ಹತ್ಯೆ ನಂತರ ತವರು ಮನೆ ಸೇರದೆ ತಮ್ಮ ಇಬ್ಬರು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ದೇಶಕ್ಕೆ ತಮ್ಮ ಆದ ಕೊಡುಗೆ ನೀಡಿದ್ದಾರೆ. ಪ್ರಧಾನ ಮಂತ್ರಿ ಆಗುವ ಅವಕಾಶ ಇದ್ದರೂ ಅದನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಸೋನಿಯಾ ಗಾಂಧಿ ಅವರ ಕುಟುಂಬ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶದ ಪ್ರಧಾನ ಮಂತ್ರಿಗಳಾಗಿ ಬಡವರು, ನೊಂದವರು, ಮತ್ತು ಶೋಷಿತರ ಪರವಾದ ಆಡಳಿತ ನೀಡಿ ದೇಶಕ್ಕೆ ಮಾದರಿಯಾಗಿದ್ದಾರೆ' ಎಂದು ಸ್ಮರಿಸಿದರು.

'ಚಿಕ್ಕಮಗಳೂರಿಗೆ ಹೋಗಿ ಸಿ.ಟಿ.ರವಿ ಎಂದು ಕೇಳಿದರೆ ಜನ ಯಾವ ಸಿ.ಟಿ.ರವಿ ಲೂಟಿ ರವಿನಾ ಎಂದು ಹೇಳುತ್ತಾರೆ. ಅದಕ್ಕಿಂತ ಈತನಿಗೆ ಗೌರವ ಬೇಕೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಈತ ಕಂಡ ಕಡೆಗಳಲ್ಲಿ ಈತನಿಗೆ ಸಗಣಿ ನೀರನ್ನು ಎರಚಿ ಮಧ್ಯದ ಬಾಟಲಿಗಳನ್ನು ಎಸೆದು ಬುದ್ಧಿ ಕಲಿಸಬೇಕು' ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. .

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್,ಡಿಸಿಸಿ ಕಾರ್ಯದರ್ಶಿ ಡೈರಿ ವೆಂಕಟೇಶ್,ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್,ಮುಖಂಡರುಗಳಾದ ವಿಜಯ್ ಕುಮಾರ್,ಗುಣಶೇಖರ್,ವಿಶ್ವ,ಶಂಕರ್,ಆರ್ ಹೆಚ್.ಕುಮಾರ್,ಪ್ರಚಾರ ಸಮಿತಿ ಅಧ್ಯಕ್ಷರಾದ ಅಶೋಕ್,ಫಾರುಖ್,ನಾಸೀರ್,ಕುರುಬಾರಳ್ಳಿ ಪ್ರಕಾಶ್,ಕುಮಾರ್(ಕುಮ್ಮಿ),ಧರ್ಮೇಂದ್ರ,ಅಶೋಕಪುರಂ ಪುಟ್ಟರಾಜು,ರವಿ,ರಾಘವೇಂದ್ರ(ಮೊಟ್ಟೆ), ಸಂತೋಷ್,ಮಹದೇವು, ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News