ರಾಜ್ಯದಲ್ಲಿ ಅರೆ ಸೈನಿಕ ಕಲ್ಯಾಣ ಮಂಡಳಿ ಸ್ಥಾಪಿಸಲು ಯು.ಟಿ.ಖಾದರ್ ಆಗ್ರಹ

Update: 2022-12-23 11:14 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.23: ಕೇಂದ್ರೀಯ ಅರೆಸೇನಾ ಪಡೆಗಳಾದ ಗಡಿಭದ್ರಾ ಪಡೆ, ಔದ್ಯೋಗಿಕ ಸುರಕ್ಷಾ ಪಡೆ, ಇಂಡೋ ಟಿಬೇಟಿಯನ್ ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಪಡೆ, ಅಸ್ಸಾಂ ರೈಫಲ್ಸ್‍ನಲ್ಲಿ ಸೇವೆ ಸಲ್ಲಿಸುವ ನಮ್ಮ ರಾಜ್ಯದ ಯೋಧರು, ಸೇವೆಯಿಂದ ನಿವೃತ್ತರಾದ ಮಾಜಿ ಯೋಧರು ಹಾಗೂ ಹುತಾತ್ಮ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ರಾಜ್ಯದಲ್ಲಿ ‘ಅರೆ ಸೈನಿಕ ಕಲ್ಯಾಣ ಮಂಡಳಿ’ ಸ್ಥಾಪಿಸಿ, ಸರಕಾರದಿಂದ ಸಾಂವಿಧಾನಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ (U. T. Khader) ಆಗ್ರಹಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 73ರಡಿಯಲ್ಲಿ ಸರಕಾರದ ಗಮನ ಸೆಳೆದ ಅವರು, ಒಂದು ವೇಳೆ ಸರಕಾರ ಈ ನಿಟ್ಟಿನಲ್ಲಿ ಆಲೋಚನೆ ಮಾಡದಿದ್ದರೆ ಅಗ್ನಿಪಥ್ ಮಾದರಿಯಲ್ಲಿ ಈ ಪಡೆಗಳಲ್ಲಿ ಸೇವೆ ಸಲ್ಲಿಸುವವರಿಗೂ ನಿವೃತ್ತಿಯಾದ ನಂತರ ಯಾವುದೆ ಬಗೆಯ ಸೌಲಭ್ಯಗಳು ಇಲ್ಲದಂತಾಗುತ್ತದೆ.ಯಾರೊಬ್ಬರೂ ಅರೆಸೇನಾ ಪಡೆಗಳತ್ತ ಮುಖ ಮಾಡಲು ಹೋಗುವುದಿಲ್ಲ ಎಂದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ, ಮಾಜಿ ಸೈನಿಕರಿಗೆ ಸರಕಾರಿ ಭೂಮಿ ಮಂಜೂರು ಮಾಡುವುದು ಸೇರಿದಂತೆ ಅನೇಕ ಸೌಲಭ್ಯಗಳು ಇವೆ. ಅರೆಸೇನಾಪಡೆಯಿಂದ ನಿವೃತ್ತಿಯಾಗುವವರಿಗೂ ಅದೇ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು.ನಮ್ಮ ಜಿಲ್ಲೆಯಲ್ಲಿ ಅಂತಹ ಹಲವಾರು ಮಂದಿ ಇದ್ದಾರೆ ಎಂದರು.

ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಆರ್‍ಪಿಎಫ್), ಗಡಿ ಭದ್ರತಾ ಪಡೆ(ಬಿಎಸ್‍ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್), ಇಂಡೋ ಟಿಬೇಟಿಯನ್ ಗಡಿ ಪೊಲೀಸ್(ಐಟಿಬಿಪಿ) ಹಾಗೂ ಸಶಸ್ತ್ರ ಸೀಮಾ ಬಲ್(ಎಸ್‍ಎಸ್‍ಬಿ) ನಿವೃತ್ತ ಸಿಬ್ಬಂದಿಗಳನ್ನು ರಾಜ್ಯದಲ್ಲಿ ‘ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ’ಗಳು ಎಂದು ಪದನಾಮೀಕರಿಸಲಾಗಿದೆ ಎಂದರು.

ಅಲ್ಲದೆ, ಇವರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ಹಾಗೂ ಸಮಾಲೋಚನೆಗೊಳಪಟ್ಟು ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಅರ್ಹ ಸೌಲಭ್ಯಗಳನ್ನು ಪರಿಗಣಿಸಲು ಪ್ರಸಕ್ತ ಸಾಲಿನ ಅ.12ರಂದು ಸರಕಾರದ ಆದೇಶ ಹೊರಡಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

Full View

Similar News