ಸದನದಲ್ಲೇ ಪಾಲನೆಯಾಗದ ‘ಕೋವಿಡ್ ಮಾರ್ಗಸೂಚಿ’
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 23: ಕೋವಿಡ್ ಸಾಂಕ್ರಾಮಿಕ ವಿದೇಶದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಒಳಾಂಗಣದಲ್ಲಿ ‘ಮಾಸ್ಕ್’ ಧರಿಸುವಂತೆ ಸರಕಾರಮಾರ್ಗಸೂಚಿ ಹೊರಡಿಸಿದ್ದರೂ ಸದನದಲ್ಲಿ ಜನಪ್ರತಿನಿಧಿಗಳೇ ಅದನ್ನು ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಶುಕ್ರವಾರ ವಿಧಾನಸಭೆ ಕಲಾಪಕ್ಕೆ ಆಗಮಿಸುವ ಎಲ್ಲ ಸದಸ್ಯರು ಮಾಸ್ಕ್ ಧರಿಸಿಕೊಂಡು ಹಾಜರಾಗಬೇಕು ಎಂದು ಸೂಚಿಸಲಾಗಿತ್ತು. ಆದರೆ, ಬಹುತೇಕ ಸಚಿವರು ಹಾಗೂ ಶಾಸಕರು ಮಾಸ್ಕ್ ಧರಿಸದೆ ಸದನಕ್ಕೆ ಹಾಜರಾಗಿದ್ದರು.
ಕೋವಿಡ್ ನಾಲ್ಕನೆ ಅಲೆ ಹಿನ್ನಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.ಒಳಾಂಗಣದಲ್ಲಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿತ್ತು.
ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಗುತ್ತಿದ್ದು,ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿತ್ತು.