ಮತದಾರರ ಮಾಹಿತಿ ದುರ್ಬಳಕೆ ಆರೋಪ: ಶ್ರೀನಿವಾಸ್‍ಗೆ ಹೈಕೋರ್ಟ್‍ನಿಂದ ನಿರೀಕ್ಷಣಾ ಜಾಮೀನು
ಬೆಂಗಳೂರು, ಡಿ.23: ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನಿರೀಕ್ಷಣಾ ಜಾಮೀನು ಕೋರಿ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ನಮ್ಮ ಕಕ್ಷಿದಾರರು ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಘಟನೆಗೂ ಅರ್ಜಿದಾರರಿಗೂ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ. ಪ್ರಕರಣ ಸಂಬಂಧ ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು. ಇದರಿಂದ ನ್ಯಾಯಸಮ್ಮತ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಅಲ್ಲದೆ, ಮತದಾರರ ಮಾಹಿತಿ ಸಂಗ್ರಹಿಸುವ ಚಟುವಟಿಕೆಯಲ್ಲಿ ತನ್ನ ಪಾತ್ರವಿಲ್ಲ. ಇದಕ್ಕೆ ಸರಕಾರೇತರ ಸಂಸ್ಥೆ ಚಿಲುಮೆಯ ಉದ್ಯೋಗಿಗಳು ಉತ್ತರಿಸಬೇಕಿದೆ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣವೇನು?: ಶ್ರೀನಿವಾಸ್ ಅವರು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿದ್ದರು. ಇವರನ್ನು ಸೇವೆಯಿಂದ ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಚುನಾವಣಾ ಆಯೋಗವು ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ಅಮಾನತು ಮಾಡಿದ್ದು, ಲಿಖಿತ ಅನುಮತಿ ಇಲ್ಲದೇ ಕೇಂದ್ರಸ್ಥಾನ ತೊರೆಯದಂತೆ ಸರಕಾರವು ನಿಬರ್ಂಧ ವಿಧಿಸಿತ್ತು.
ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‍ಒ/ಬಿಎಲ್ಸಿ) ಎಂದು ಗುರುತಿನ ಚೀಟಿ ವಿತರಿಸಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಈ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿರುವ ಎಲ್ಲ ಪ್ರಕ್ರಿಯೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದ್ದ ಕೇಂದ್ರ ಚುನಾವಣಾ ಆಯೋಗವು ಲೋಪ ತಡೆಯುವಲ್ಲಿ ವಿಫಲರಾದ ಆರೋಪದಲ್ಲಿ ಶ್ರೀನಿವಾಸ್ ಮತ್ತು ರಂಗಪ್ಪ ಅವರ ಅಮಾನತಿಗೆ ಸೂಚನೆ ನೀಡಿತ್ತು.