ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ: ಸಿಎಂ ಬೊಮ್ಮಾಯಿ
Update: 2022-12-24 08:31 GMT
ಶಿಗ್ಗಾವಿ, ಡಿ. 24: 'ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹಣಕಾಸು ಇಲಾಖೆ ಜೊತೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ಎಲ್ಲಾ ಇಲಾಖೆಯವರ ಜೊತೆಗೂ ಚರ್ಚೆ ಮಾಡಲಿದ್ದೇನೆ. ಬಜೆಟ್ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಮುಂದಿನ ಜನವರಿ ತಿಂಗಳಿಂದಲೇ ಶುರು ಮಾಡಲಿದ್ದೇನೆ' ಎಂದು ತಿಳಿಸಿದರು.
'ಸೋಮವಾರ ಸಂಜೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಲಿದ್ದೇನೆ. ಅಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದು, ಇದರ ಜೊತೆಗೆ ಖಂಡಿತವಾಗಿ ರಾಜಕೀಯ ಚರ್ಚೆ ಕೂಡ ಆಗುತ್ತದೆ ಎಂದ ಅವರು, ಚುನಾವಣಾ ತಯಾರಿ ಕುರಿತು ಕೂಡಾ ಚರ್ಚೆ ಮಾಡಲಿದ್ದೇವೆ' ಎಂದು ಹೇಳಿದರು.