8,001 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳ ಮಂಡನೆ ಮಾಡಿದ ಸಿಎಂ
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 26: ರಾಜ್ಯದ ವಿಧಾನಸಭೆ ಚುನಾವಣೆ ವೆಚ್ಚಕ್ಕೆ 300ಕೋಟಿ ರೂ., ಜಾನುವಾರುಗಳಿಗೆ ತಗುಲಿರುವ ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳ ಮಾಲಕರಿಗೆ ಪರಿಹಾರ ನೀಡಲು 30ಕೋಟಿ ರೂ.ಸೇರಿದಂತೆ ಒಟ್ಟು 8,001 ಕೋಟಿರೂ. ಮೊತ್ತದ ಪೂರಕ ಅಂದಾಜು(ಎರಡನೆ ಕಂತಿನ)ಗಳನ್ನು ಮಂಡನೆ ಮಾಡಲಾಗಿದೆ.
ಸೋಮವಾರ ವಿಧಾನಸಭೆಯಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪೂರಕ ಅಂದಾಜುಗಳನ್ನು ಮಂಡನೆ ಮಾಡಿದರು.
ಒಟ್ಟಾರೆ 8001.13 ಕೋಟಿರೂ.ಪೂರಕ ಅಂದಾಜುಗಳ ಪೈಕಿ 1,799ಕೋಟಿ ರೂ. ಹೊಂದಾಣಿಕೆ ವೆಚ್ಚ ಹಾಗೂ 1,134.72 ಕೋಟಿ ರೂ.ಕೇಂದ್ರ ಸಹಯೋಗದ ಹಣವಾಗಿದ್ದು ,ರಾಜ್ಯದ ಬೊಕ್ಕಸದಿಂದ ವೆಚ್ಚವಾಗಿರುವ ವೆಚ್ಚ 5,067.40 ಕೋಟಿರೂ.ಎಂದು ಪೂರಕ ಅಂದಾಜುಗಳಲ್ಲಿ ಉಲ್ಲೇಖಿಸಲಾಗಿದೆ.
2023ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ 300ಕೋಟಿ ರೂ.ವೆಚ್ಚ ಒದಗಿಸಲಾಗಿದೆ. ಸಿಎಂ, ಸಚಿವರು, ರಾಜ್ಯಪಾಲರು ಹಾಗೂ ಇತರೆ ಗಣ್ಯರ ಪ್ರಯಾಣಕ್ಕೆ ಬಾಡಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಬಿಲ್ ಪಾವತಿಸಲು 6ಕೋಟಿ ರೂ.ಗಳನ್ನು ಪೂರಕ ಅಂದಾಜಿನಲ್ಲಿ ನೀಡಲಾಗಿದೆ.
ಸ್ಥಳೀಯ ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿ ಹೆಚ್ಚಿಸಲು ಕೆಎಂಎಫ್ ಮೂಲಕ ಗೋತಳಿಗಳನ್ನು ರೈತರಿಗೆ ಹಂಚಿಕೆ ಮಾಡಲು 7ಕೋಟಿ ರೂ.ಹಂಚಿಕೆ ಮಾಡಲಾಗಿದೆ. ನಾಡದೋಣಿ ಮೀನುಗಾರಿಕೆಗೆ ಸೀಮೆಎಣ್ಣೆ ಸರಬರಾಜಿಗೆ 18.42ಕೋಟಿ ರೂ.ನೀಡಲಾಗಿದೆ.
ಮುಖ್ಯಮಂತ್ರಿ 1ಲಕ್ಷ ಬಹುಮಹಡಿ ವಸತಿಯೋಜನೆಗೆ 256 ಕೋಟಿರೂ., ಬಿಬಿಎಂಪಿಯಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ವೇತನಕ್ಕಾಗಿ 200ಕೋಟಿ ರೂ., ಇತ್ತೀಚೆಗೆ ಮೃತರಾದ ಉಪಸಭಾಧ್ಯಕ್ಷ ಆನಂದ ಮಾಮನಿ ಪಡೆದಿದ್ದ ಚಿಕಿತ್ಸೆಗೆ 46 ಲಕ್ಷರೂ.ಹೆಚ್ಚುವರಿಯಾಗಿ ಪಾವತಿಸಲು ಒದಗಿಸಲಾಗಿದೆ.