ಭಾರತ ಮತ್ತು ಐರಿಷ್ ಸಂಬಂಧ
ವಾಣಿಜ್ಯ ವಹಿವಾಟು
ಇಕ್ರಿಯರ್ ಅಧ್ಯಯನದ ಪ್ರಕಾರ ಭಾರತ ಹಾಗೂ ಐರ್ಲೆಂಡ್ ದೇಶಗಳು ಪರಸ್ಪರ ಸಹಕಾರ ನೀಡಿದರೆ ಐ.ಟಿ. ಕ್ಷೇತ್ರ, ಔಷಧೀಯ ತಯಾರಿಕೆ ಹಾಗೂ ಸರಬರಾಜು, ತಂತ್ರಜ್ಞಾನ, ವೃತ್ತಿಯ ನಿರ್ವಹಣಾ ಸೇವೆಗಳೇ ಮೊದಲಾದ ಕ್ಷೇತ್ರಗಳಿಂದ ಯೂರೋಪಿಯ ಸಂಘಕ್ಕೆ ಹಾಗೂ ಇತರ ರಾಷ್ಟ್ರಗಳಿಗೆ ರಫ್ತು ಮಾಡುವುದರಿಂದ 19 ಬಿಲಿಯನ್ ಡಾಲರ್‌ಗಳಷ್ಟು ವಹಿವಾಟನ್ನು ಸೃಷ್ಟಿಸಬಹುದು ಎಂದು ಅಂದಾಜು ಮಾಡಿದೆ. ಈ ಗುರಿಯನ್ನು 2020ರಲ್ಲೇ ಮುಟ್ಟಬೇಕಾಗಿತ್ತು. ಆದರೆ ಕೊರೋನ ಮಹಾಮಾರಿಯಂತಹ ಸಂಕಷ್ಟಕ್ಕೆ ಇಡೀ ವಿಶ್ವವೇ ತುತ್ತಾದ ಕಾರಣ ಈ ಗುರಿ ಸ್ವಲ್ಪಮುಂದೂಡಬಹುದು.
ಸುಂದರ ಕರಾವಳಿ, ದೃಶ್ಯಗಳು, ಕಡಲ ತೀರದ ಪಟ್ಟಣಗಳು ಹಾಗೂ ಗ್ರಾಮಗಳಿಂದ ಸುತ್ತುವರಿದ ವಿಶ್ವ ಪ್ರಸಿದ್ಧ ಪಟ್ಟ ದೇಶ, ಐರ್ಲೆಂಡ್. ಭಾರತದಂತೆ ಬ್ರಿಟನ್‌ನ ವಸಾಹತುಗಳಿಗೆ ಸೇರಿದ ಈ ದ್ವೀಪ ರಾಷ್ಟ್ರ ಕಳೆದ ಶತಮಾನದ ಮೊದಲ ಭಾಗದಲ್ಲಿ (1921) ಉಭಯ ರಾಷ್ಟ್ರಗಳ ಸಂಧಾನದ ಮೂಲಕ ಬೇರೆ ರಾಷ್ಟ್ರಗಳಾಗಿ ಬೇರ್ಪಟ್ಟಿದ್ದವು. 1948ರಲ್ಲಿ ಎರಡು ದೇಶಗಳು ಸ್ವತಂತ್ರ ರಾಷ್ಟ್ರವಾಗಿ ಘೋಷಿಸಿಕೊಂಡಿವೆ. ಬ್ರಿಟನ್‌ನ ಪಕ್ಕದಲ್ಲಿದ್ದರೂ ಯಾವುದೇ ಪ್ರಬಲ ರಾಷ್ಟ್ರಗಳ ತೆಕ್ಕೆಗೆ ಸಿಲುಕದ ಶ್ರೀಮಂತ ಹಾಗೂ ಅಭಿವೃದ್ಧಿ ಹೊಂದಿದ ಅಲಿಪ್ತ ರಾಷ್ಟ್ರವಾಗಿ ಈ ದೇಶ ಪ್ರಸಿದ್ಧಿ ಪಡೆದಿದೆ. ಐರ್ಲೆಂಡ್‌ನ ಉತ್ತರ ಭಾಗ ಈಗಲೂ ಬ್ರಿಟನ್ ರಾಷ್ಟ್ರದ ಹಿಡಿತದಲ್ಲಿದೆ.
ಬ್ರಿಟನ್, ಯೂರೋಪಿಯ ಸಂಘದಿಂದ ಹೊರಬಂದ (ಬ್ರೆಕ್ಸಿಟ್) ತರುವಾಯ ಯೂರೋಪಿನಲ್ಲಿ ಪ್ರಾಥಮಿಕವಾಗಿ ಇಂಗ್ಲಿಷ್ ಭಾಷೆ ಮಾತನಾಡುವ ಏಕೈಕ ರಾಷ್ಟ್ರವಾಗಿ ಉಳಿದುಕೊಂಡಿದೆ. ಬ್ರಿಟನ್‌ನಿಂದ ಸ್ವತಂತ್ರವಾದರೂ ಉಭಯ ರಾಷ್ಟ್ರಗಳ ಪ್ರಜೆಗಳೂ ಯಾವುದೇ ಅಡೆ ತಡೆಗಳಿಲ್ಲದೆ ಎಲ್ಲಿ ಬೇಕಾದರೂ ವಾಸ ಮಾಡುವುದಾಗಲಿ, ವ್ಯವಹಾರ, ಉದ್ಯೋಗಗಳಲ್ಲಿ ತೊಡಗಬಹುದಾದ ಸಡಿಲ ವ್ಯವಸ್ಥೆಯನ್ನು ರೂಪಿಸಿಕೊಂಡಿವೆ. ಇಂಗ್ಲಿಷಿನ ಮೇರು ಕವಿ ಹಾಗೂ ನಾಟಕಕಾರ ಆಸ್ಕರ್ ವೈಲ್ಡ್ ಈ ದೇಶದ ಸುಪುತ್ರರಲ್ಲೊಬ್ಬರು.
ಡಬ್ಲಿನ್ ಈ ರಾಷ್ಟ್ರದ ರಾಜಧಾನಿ, ದೇಶದ 50ಲಕ್ಷಕ್ಕೂ ಮಿಗಿಲಾದ ಜನಸಂಖ್ಯೆಯಲ್ಲಿ 21 ಲಕ್ಷ ಜನರು ಡಬ್ಲಿನ್ ಹಾಗೂ ಅದರ ಆಸುಪಾಸಿನಲ್ಲಿ ನೆಲೆಸಿರುತ್ತಾರೆ. ಭಾರತದಂತೆ ಈ ರಾಷ್ಟ್ರವೂ ಕೂಡ ಮೇಲ್ಮನೆ ಹಾಗೂ ಕೆಳಮನೆಯುಳ್ಳ ಸಂಸತ್ತನ್ನು ಹೊಂದಿದೆ. ಆಡಳಿತ ವ್ಯವಸ್ಥೆಯಲ್ಲಿಯೂ ಎರಡು ರಾಷ್ಟ್ರಗಳಿಗೆ ಆಪಾರ ಸಾಮ್ಯವಿದೆ.
ಭಾರತ ಹಾಗೂ ಬ್ರಿಟನ್‌ನ ಸಂಬಂಧಗಳು ಮಧುರವಾಗಿದ್ದ ಕಾರಣ ಆ ದೇಶದ ನೆರೆರಾಷ್ಟ್ರದೊಡನೆ ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧಗಳು ಬ್ರಿಟನ್‌ನ ಇಚ್ಛಾನುಸಾರವಾಗಿಯೇ ಇರುತ್ತಿದ್ದವು. ಆದರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಏಕೈಕ ರಾಷ್ಟ್ರವಾಗಿ ಉಳಿದಿರುವುದರಿಂದ ಇಂಗ್ಲಿಷ್ ಭಾಷೆಯೇ ಭಾರತಕ್ಕೂ ಯೂರೋಪಿಯ ಸಂಘಕ್ಕೂ ಇರುವ ಬಲವಾದ ಕೊಂಡಿ.
ಬ್ರಿಟನ್ ಯೂರೋಪಿಯ ಸಂಘದಿಂದ ಹೊರಬಂದ ತರುವಾಯ ಯೂರೋಪ್ ಹಾಗೂ ಭಾರತದ ವಾಣಿಜ್ಯ ವಹಿವಾಟು ಅನೇಕ ಪಟ್ಟು ವೃದ್ಧಿಸಿದೆ ಎಂದು ಜಾಗತಿಕ ವಿಷಯಗಳ ಅಧ್ಯಯನ ಸಂಸ್ಥೆ ಇಕ್ರಿಯರ್ ಅಭಿಪ್ರಾಯ ಪಟ್ಟಿದೆ. 2020ರಲ್ಲಿ ಭಾರತ ಹಾಗೂ ಐರ್ಲೆಂಡ್ ವಾಣಿಜ್ಯ ಸೇವೆಗಳ ವಹಿವಾಟುಗಳು ಸರಕು ವ್ಯವಹಾರಗಳ ನಾಲ್ಕು ಪಟ್ಟು ಇತ್ತು. ಭಾರತ ಹಾಗೂ ಐರ್ಲೆಂಡ್‌ಗಳ ಒಟ್ಟು ವ್ಯವಹಾರ, ಸರಕು ಹಾಗೂ ಸೇವೆಗಳು ಸೇರಿದಂತೆ 5.6 ಬಿಲಿಯನ್ ಡಾಲರ್‌ಗಳಷ್ಟಿತ್ತು ಇದರಲ್ಲಿ ಸರಕುಗಳ ರಫ್ತಿನಿಂದ ಗಳಿಕೆ 1.26 ಬಿಲಿಯನ್ ಡಾಲರ್‌ಗಳು ವಾಣಿಜ್ಯ ಸೇವೆಗಳ ವಹಿವಾಟುಗಳು ಮತ್ತು ಸರಕುಗಳ ರಫ್ತಿಗಿಂತ ನಾಲ್ಕು ಪಟ್ಟು ಹೆಚ್ಚಿದ್ದಿತ್ತು. 2020ರ ತರುವಾಯದ ರಫ್ತು, ಆಮದುಗಳ ಸಂಖ್ಯೆ ಬಿಡಿ ಬಿಡಿಯಾಗಿ ದೊರಕುತ್ತಿದ್ದು ಇತ್ತೀಚಿನ ವಹಿವಾಟಿನ ಸಮಗ್ರ ಚಿತ್ರ ಲಭ್ಯವಿಲ್ಲ.
ಕಳೆದ ಒಂದು ದಶಕದಲ್ಲಿ ಉಭಯ ರಾಷ್ಟ್ರಗಳ ಸರಕುಗಳ ವಾಣಿಜ್ಯ/ವಹಿವಾಟು ಭಾರತದಿಂದ ಔಷಧೀಯ ಸಾಮಗ್ರಿಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ದೇಶದ ರಫ್ತಿನ ಶೇ. 27.3 ಭಾಗವಾಗಿದ್ದಿತ್ತು. ಇದೇ ಪ್ರಮುಖ ಆದಾಯ. ಇದಲ್ಲದೆ ರಫ್ತಾದ ಸಾಮಗ್ರಿಗಳಲ್ಲಿ ಜೈವಿಕ ರಸಾಯನ ಸಾಮಗ್ರಿಗಳು, ಅಣು ಸ್ಥಾವರ ಘಟಕಗಳು ಹಾಗೂ ಯಂತ್ರ ಸಾಮಗ್ರಿಗಳಿದ್ದವು. 2014ರಲ್ಲಿ ಎರಡು ದೇಶಗಳ ವಹಿವಾಟುಗಳು ತುತ್ತ ತುದಿಯಲ್ಲಿದ್ದು, 1.26 ಬಿಲಿಯನ್ ಡಾಲರ್‌ಗಳು ಇದ್ದವು. ಇದಕ್ಕೆ ವಿಮಾನಗಳು ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳ ರಫ್ತು ಕಾರಣವಾಗಿತ್ತು. ಈ ವೈಮಾನಿಕ ಉಪಕರಣಗಳು ಆ ವರ್ಷದ ಶೇ.40 ಭಾಗದಷ್ಟು ರಫ್ತಿನ ಭಾಗವನ್ನು ಆಶ್ರಯಿಸಿತ್ತು. ಇದರ ತರುವಾಯದ 2015ರಲ್ಲಿ ಸರಕುಗಳ ವಾಣಿಜ್ಯ ವಹಿವಾಟುಗಳು, 947 ಮಿಲಿಯನ್ ಡಾಲರ್‌ಗಳಷ್ಟು ಇಳಿಕೆಯಾಗಿತ್ತು. ಸರಕುಗಳ ರಫ್ತು 2010ರಲ್ಲಿ 108 ಮಿಲಿಯನ್ ಡಾಲರ್‌ಗಳಿಂದ 2020ರ ವೇಳೆಗೆ 1.4 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿತ್ತು.
ಐರ್ಲೆಂಡ್ ದೇಶಕ್ಕೆ ವಾಣಿಜ್ಯ ಸೇವೆಗಳ ರಫ್ತಿನಲ್ಲಿ ಭಾರತದ ಗಳಿಕೆ ಸರಕು ವ್ಯವಹಾರಗಳಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಆದಾಯವನ್ನು ಗಳಿಸಿಕೊಟ್ಟಿತ್ತು. ಇಷ್ಟಾದರೂ ಸಹ ವಾಣಿಜ್ಯ ಸೇವೆಗಳ ಗಳಿಕೆಯಲ್ಲಿ ಉಭಯ ರಾಷ್ಟ್ರಗಳ ಬಹುಪಾಲು ವಹಿವಾಟು ಸೇವಾ ಕ್ಷೇತ್ರದಲ್ಲೇ ಅಂದರೆ ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಐ.ಸಿ.ಟಿ. ಉದ್ಯಮ, ವೃತ್ತೀಯ ಹಾಗೂ ಪ್ರಬಂಧನಾತ್ಮಕ ನಿರ್ವಹಣಾ ಸಲಹಾ ಸೇವೆಗಳು ಇತ್ಯಾದಿಗಳಲ್ಲಿ ಎರಡು ರಾಷ್ಟ್ರಗಳ ಸಮನ್ವಯತೆಗೆ ಸಂಭಾವ್ಯ ಕಾರಣಗಳಾದವು.
ಯೂರೋಪಿಯ ಸಂಘದಲ್ಲಿ ಐರ್ಲೆಂಡ್ ಈಗ ಒಂದು ಪ್ರಭಾವಿ ರಾಷ್ಟ್ರ. ಸಂಘದ ಈಗಿನ ವ್ಯವಸ್ಥೆಯಲ್ಲಿ ಶ್ರಮದಾಯಕ ತಯಾರಿಕಾ ಉದ್ದಿಮೆಗಳಲ್ಲಿ ಭಾರತಕ್ಕೆ ವಿಯೆಟ್ನಾಂ ಹಾಗೂ ಬಾಂಗ್ಲಾದೇಶಗಳಂತಹ ಸೋವಿ ಬೆಲೆಯ ಅಪಾರ ಕಾರ್ಮಿಕ ಶಕ್ತ (ಲೋ ಕಾಸ್ಟ್ ಲೇಬರ್ ಆಬಂಡೆಂಟ್) ರಾಷ್ಟ್ರಗಳಿಂದ ಭಾರತಕ್ಕೆ ಹಿನ್ನಡೆಯಾಗಿದೆ. ಈ ರಾಷ್ಟ್ರಗಳಿಗೆ ಈಗ ಯಾವುದೇ ರೀತಿಯ ನಿರ್ಬಂಧವಿಲ್ಲ ಹಾಗೂ ಎಲ್ಲ ಆಮದುಗಳು ತೆರಿಗೆ ಮುಕ್ತ ಭಾರತದಿಂದ ರಫ್ತಾದ ಗೃಹ ಬಳಕೆಯ ವಸ್ತುಗಳಾದ ಜವಳಿ, ಪರದೆಗಳು ಇನ್ನಿತರ ವಸತಿ ಸಜ್ಜುಗೊಳಿಸುವ ಸಾಮಗ್ರಿಗಳು, ಮೇಲಾಗಿ ವಾಹನಗಳ ಸರಬರಾಜಿನಲ್ಲಿ ಈ ಚಿಕ್ಕ ರಾಷ್ಟ್ರಗಳಷ್ಟೇ ಸ್ಪರ್ಧಾತ್ಮಕವಾಗಿದ್ದರೂ ಭಾರತದಿಂದ ಆಮದಾದ ವಸ್ತುಗಳ ಮೇಲೆ 10 ರಿಂದ 12 ಭಾಗ ಸುಂಕಗಳನ್ನು ವಿಧಿಸುವುದರಿಂದ ಸಗಟು ಹಾಗೂ ಬಿಡಿ ಮಾರುಕಟ್ಟೆಗಳಲ್ಲಿ ಭಾರತೀಯ ವಸ್ತುಗಳು ಜನ ಸಾಮಾನ್ಯರಿಗೆ ಅಷ್ಟರ ಮಟ್ಟಿಗೆ ದುಬಾರಿಯಾಗುತ್ತವೆ. ಯೂರೋಪ್ ಸಂಘದ ವ್ಯವಸ್ಥೆಯಲ್ಲಿ ಸುಂಕಗಳನ್ನು ವಿಧಿಸುವ ವಿಧಾನಗಳಲ್ಲಿ ಪರಿವರ್ತನೆಯಾದರೆ ಭಾರತೀಯ ಸಾಮಗ್ರಿಗಳು ಸ್ಪರ್ಧಾತ್ಮಕವಾಗಿ ಬಳಕೆದಾರರನ್ನು ಸುಲಭ ದರಗಳಲ್ಲಿ ತಲುಪಬಹುದು ಎಂಬುದು ಇಕ್ರಿಯರ್ ಅಧ್ಯಯನದ ಸಾರಾಂಶ.
ಅದೇ ರೀತಿ ಸುಮಾರು 50 ವಸ್ತುಗಳು ಅದರಲ್ಲಿಯೂ ಕುಶಲ ತಂತ್ರಜ್ಞಾನದ ಸಾಮಗ್ರಿಗಳನ್ನು ಭಾರತದಿಂದ ಐರ್ಲೆಂಡ್ ಆಮದು ಮಾಡಿಕೊಳ್ಳುತ್ತಿದೆ. ಈ ಸಾಮಗ್ರಿಗಳು ಯೂರೋಪಿನ ಹೊರಗೆ ಸ್ಪರ್ಧಾತ್ಮಕವಾಗಿಯೂ ಇವೆ. ಆದರೆ ಶುಲ್ಕ ವಿಧಿಯಿಂದಾಗಿ ಭಾರತೀಯ ಸಾಮಗ್ರಿಗಳು ದುಬಾರಿಯಾಗುತ್ತವೆ. ಔಷಧ ಸಾಮಗ್ರಿಗಳು ಇದೇ ರೀತಿ ಐರ್ಲೆಂಡ್‌ಗೆ ರಫ್ತಾಗುತ್ತಿರುವ ಭಾರತೀಯ ವಸ್ತುಗಳು. ಳೆದ ಕೆಲ ವರ್ಷಗಳಿಂದ ಈ ಔಷಧಿಗಳ ಉಪಯೋಗ ಹೆಚ್ಚಾಗುತ್ತಿದೆ. ಐರ್ಲೆಂಡ್ ದೇಶವೊಂದೇ ಈ ಸಾಮಗ್ರಿಗಳ ಮೇಲೆ 2.7 ಬಿಲಿಯನ್ ಯೂರೋಗಳಷ್ಟನ್ನು ವೆಚ್ಚ ಮಾಡುತ್ತಿದೆ.
ಹಾಗೆಯೇ ಭಾರತದಲ್ಲಿ ಐರ್ಲೆಂಡ್‌ನಿಂದ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಗೂ ನವೋದ್ಯಮ/ಸ್ಟಾರ್ಟ್ ಅಪ್, ಉದ್ಯಮಗಳಲ್ಲಿ ನೇರ ಬಂಡವಾಳ ಹೂಡಿಕೆಗೆ ಅಪಾರವಾದ ಅವಕಾಶಗಳಿವೆ. ಆ ದೇಶದಿಂದ ಭಾರತದಲ್ಲಿನ ನೇರ ಬಂಡವಾಳ 2011ರಲ್ಲಿ 39 ಮಿಲಿಯನ್ ಡಾಲರ್‌ಗಳಿದ್ದದ್ದು 2020ರಲ್ಲಿ 209 ಮಿಲಿಯನ್ ಡಾಲರ್‌ಗಳಷ್ಟು ವೃದ್ಧಿಯಾಗಿದೆ. ಈ ಬಂಡವಾಳ ವೃತ್ತೀಯ, ವಿಮೆ ಹಾಗೂ ವಾಣಿಜ್ಯ ಸೇವಾ ವಲಯಗಳಲ್ಲಿ ಹೂಡಿಕೆಯಾಗಿದೆ. ಭಾರತ ಇತ್ತೀಚಿನ ವರ್ಷಗಳಲ್ಲಿ 89 ಮಿಲಿಯನ್ ಡಾಲರ್‌ಗಳಿಂದ 2020ರಲ್ಲಿ 170 ಮಿಲಿಯನ್ ಡಾಲರ್‌ಗಳಷ್ಟು ಬಂಡವಾಳವನ್ನು ಅದರಲ್ಲೂ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಔಷಧೀಯ ಕ್ಷೇತ್ರದಲ್ಲಿ ಜೈಡಸ್, ಕ್ಯಾಡಿಲ್ಯಾಕ್, ಹೆಲ್ತ್ ಕೇರ್, ಆಲಿವರ್ ಅನಿಮಲ್ ಹೆಲ್ತ್, ಫೆಲಿಕ್ಸ್ ಫಾರ್ಮಾಸಿಟಿಕಲ್, ಆಲ್ಫಾ ಬಯೋಮೆಡ್ ಮೊದಲಾದ ಕಂಪೆನಿಗಳು ಐರ್ಲೆಂಡ್ ದೇಶದಲ್ಲಿ ಉತ್ಪಾದನೆಗೆ ಬಂಡವಾಳ ಹೂಡಿಕೆ ಮಾಡಿರುವುದನ್ನು ರಿಸರ್ವ್ ಬ್ಯಾಂಕ್ ಗಮನಿಸಿದೆ.
ಯೂರೋಪಿಯ ಸಂಘ, ಪ್ರಸಕ್ತದಲ್ಲಿ ಮಾನವರಿಗೆ, ಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ಅಪಾಯಕಾರಿಯಾದ ಸಾಮಗ್ರಿಗಳ ತಯಾರಿಕೆ, ಮಾರಾಟ ಹಾಗೂ ಉಪಯೋಗಗಳನ್ನು ನಿಷೇಧಿಸಿದೆ. ಈ ಕಾರಣದಿಂದ ಔಷಧೀಯ ತಯಾರಿಕೆಗಳಿಗೆ ಭಾರತ ರಫ್ತು ಮಾಡುತ್ತಿರುವ ಕಚ್ಚಾವಸ್ತುವಾದ ಆ್ಯಕ್ಟಿವ್ ಫಾರ್ಮಾಸಿಟಿಕಲ್ ಇಂಗ್ರಿಡಿಯೆಂಟ್ (ಎಪಿಐ) ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರೊಂದಿಗೆ ಪೆಟ್ರೋಲಿಯಮ್ ತೈಲಗಳು, ವಿಟಮಿನ್‌ಯುಕ್ತ ತೈಲಗಳು (ಎಚ್.ಎಸ್. 27) ಹಾಗೂ ರಬ್ಬರ್ ವಸ್ತುಗಳ ರಫ್ತಿನ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿಯೇ ಭಾರತೀಯ ಬೃಹತ್ ಮಾಹಿತಿ ತಂತ್ರಜ್ಞಾನ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ವಿಪ್ರೋ, ಎಚ್.ಸಿ.ಎಲ್. ಮೊದಲಾದವು ಭಾರೀ ಉದ್ದಿಮೆಗಳನ್ನು ಐರ್ಲೆಂಡ್‌ನಲ್ಲಿಯೇ ಸ್ಥಾಪಿಸಿವೆ.
ಐರ್ಲೆಂಡ್ ದೇಶ ಮಾಹಿತಿ ತಂತ್ರಜ್ಞಾನ, ಸಂವಹನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂದುವರಿದ ರಾಷ್ಟ್ರವಾದರೂ ಈ ಘಟಕಗಳಿಗೆ ಬೇಕಾಗುವ ಮಾನವ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ. ಈ ರಾಷ್ಟ್ರಕ್ಕೆ ಬೇಕಾಗುವ ನುರಿತ ಕುಶಲ ತಂತ್ರಜ್ಞರನ್ನು ಭಾರತ ಸುಲಭವಾಗಿ ಒದಗಿಸಬಲ್ಲದು.
ಉಭಯ ದೇಶಗಳ (ಇನ್ಫಾರ್ಮೇಷನ್ ಕಮ್ಯುನಿಕೇಷನ್ ಹಾಗೂ ಟೆಕ್ನಾಲಜಿ-ಐ.ಸಿ.ಟಿ.) ಸೇವೆ, ಶಿಕ್ಷಣ ಸೇವೆಗಳ ವಿಷಯದಲ್ಲಿ ವಾಣಿಜ್ಯ ವ್ಯವಹಾರಗಳಿಗೆ ಕಡಿವಾಣ ಹಾಕುವಂತಹ ನಿಯಮಗಳು ಇವೆ. ಹಾಲಿ ಐರ್ಲೆಂಡ್‌ನಲ್ಲಿ ಅನ್ವಯವಾಗುವ 4 ನಿಯಂತ್ರಣ ನಿಯಮಗಳು ಯೂರೋಪಿಯ ಸಂಘದ ಇನ್ನಿತರ ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ಇದೇ ರೀತಿ, ಆರೋಗ್ಯ ಸೇವೆಗಳಲ್ಲಿಯೂ ಐರ್ಲೆಂಡ್ ಮಾನವ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದೆೆ. ಹಾಗಾಗಿ ಅವರು ಹೊರ ರಾಷ್ಟ್ರಗಳಿಂದ ವೈದ್ಯರು ಹಾಗೂ ನರ್ಸ್‌ಗಳ ಸೇವೆಗಳನ್ನು ಪಡೆಯುತ್ತಿದ್ದಾರೆ. ಈ ದೇಶದ ಇಂತಹ ಸೇವೆಗಳಿಗೆ ಅದರಲ್ಲೂ ನರ್ಸಿಂಗ್ ಸೇವೆಗೆ ಶೇ. 50 ಭಾಗ ಭಾರತದಿಂದಲೇ ಲಭ್ಯವಾಗಿದ್ದಾರೆ. 2019ರ ಆರೋಗ್ಯ ಸೇವಾ ವೃತ್ತೀಯರ ವಲಸಿಗರ ಬಗ್ಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಿಂದ ತರಬೇತಾದ 1,200 ನರ್ಸ್‌ಗಳನ್ನು ಐರ್ಲೆಂಡ್ ಪ್ರತೀ ವರ್ಷ ನೇಮಕ ಮಾಡಿಕೊಳ್ಳುತ್ತಿದೆ.
ಒಟ್ಟಿನಲ್ಲಿ ಸೇವೆಗಳ ವಲಯಗಳಲ್ಲಿ 2020ರಲ್ಲಿ ಉಭಯ ರಾಷ್ಟ್ರಗಳು ನಾಲ್ಕು ಬಿಲಿಯನ್ ಡಾಲರ್‌ಗಳಷ್ಟು ವಹಿವಾಟು ನಡೆಸಿದ್ದವು. ಈ ರಾಷ್ಟ್ರ 11 ವಲಯದಿಂದ 1.4 ಬಿಲಿಯನ್ ಡಾಲರ್‌ಗಳಷ್ಟು ಸೇವೆಯನ್ನು ಆಮದನ್ನು ಭಾರತ ಮಾಡಿಕೊಂಡಿದ್ದ ಕಾರಣ ಭಾರತಕ್ಕೆ ಸೇವಾ ವಾಣಿಜ್ಯದಲ್ಲಿ 1.1 ಬಿಲಿಯನ್ ಡಾಲರ್‌ಗಳ ಕೊರತೆ ಸೃಷ್ಟಿಯಾಗಿತ್ತು.
ಇಕ್ರಿಯರ್ ಅಧ್ಯಯನದ ಪ್ರಕಾರ ಭಾರತ ಹಾಗೂ ಐರ್ಲೆಂಡ್ ದೇಶಗಳು ಪರಸ್ಪರ ಸಹಕಾರ ನೀಡಿದರೆ ಐ.ಟಿ. ಕ್ಷೇತ್ರ, ಔಷಧೀಯ ತಯಾರಿಕೆ ಹಾಗೂ ಸರಬರಾಜು, ತಂತ್ರಜ್ಞಾನ, ವೃತ್ತಿಯ ನಿರ್ವಹಣಾ ಸೇವೆಗಳೇ ಮೊದಲಾದ ಕ್ಷೇತ್ರಗಳಿಂದ ಯೂರೋಪಿಯ ಸಂಘಕ್ಕೆ ಹಾಗೂ ಇತರ ರಾಷ್ಟ್ರಗಳಿಗೆ ರಫ್ತು ಮಾಡುವುದರಿಂದ 19 ಬಿಲಿಯನ್ ಡಾಲರ್‌ಗಳಷ್ಟು ವಹಿವಾಟನ್ನು ಸೃಷ್ಟಿಸಬಹುದು ಎಂದು ಅಂದಾಜು ಮಾಡಿದೆ. ಈ ಗುರಿಯನ್ನು 2020ರಲ್ಲೇ ಮುಟ್ಟಬೇಕಾಗಿತ್ತು. ಆದರೆ ಕೊರೋನ ಮಹಾಮಾರಿಯಂತಹ ಸಂಕಷ್ಟಕ್ಕೆ ಇಡೀ ವಿಶ್ವವೇ ತುತ್ತಾದ ಕಾರಣ ಈ ಗುರಿ ಸ್ವಲ್ಪಮುಂದೂಡಬಹುದು.