ಬಾಗಲಕೋಟೆ: ವಿವಾದಾತ್ಮಕ 'ದಿ ಕೇರಳ ಸ್ಟೋರಿ' ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅರ್ಧ ದಿನ ರಜೆ ನೀಡಿದ ಮೆಡಿಕಲ್ ಕಾಲೇಜು
ಜನವಾದಿ ಮಹಿಳಾ ಸಂಘಟನೆ ಖಂಡನೆ
ಬಾಗಲಕೋಟೆ, ಮೇ 24: ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿರುವ 'ದಿ ಕೇರಳ ಸ್ಟೋರಿ' ಸಿನೆಮಾ ವೀಕ್ಷಿಸಲು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನದ ರಜೆ ನೀಡಿರುವ ಘಟನೆ ಬಾಗಲಕೋಟೆಯ ಇಳಕಲ್ ನಲ್ಲಿ ವರದಿಯಾಗಿದೆ.
ಜಿಲ್ಲೆಯ ಇಳಕಲ್‌ನಲ್ಲಿರುವ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಬುಧವಾರ (ಮೇ 24) ಮಧ್ಯಾಹ್ನ ತನ್ನ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಿದ್ದು ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಎಲ್ಲಾ ವಿದ್ಯಾರ್ಥಿಗಳಿಗೆ ಸೂಚಿಸಿದೆ ಎನ್ನಲಾಗಿದೆ.
ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಹೆಸರಿನಲ್ಲಿ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಬಿಎಎಮ್ಎಸ್ ಮೊದಲ ವರ್ಷದಿಂದ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿಗಳು ಮೇ 24ರಂದು 11 ಗಂಟೆ ಸುಮಾರಿಗೆ ಸ್ಥಳೀಯ ಚಿತ್ರ ಮಂದಿರಕ್ಕೆ ತೆರಳಿ ಸಿನೆಮಾ ನೋಡುವಂತೆ ತಿಳಿಸಲಾಗಿದೆ.
► ಜನವಾದಿ ಮಹಿಳಾ ಸಂಘಟನೆ ಖಂಡನೆ
''ಸಂಪೂರ್ಣ ಸುಳ್ಳು ವಿವರಗಳಿಂದ ಕೂಡಿರುವ ವಿವಾದಿತ ಮತ್ತು ದ್ವೇಷ ಪ್ರಚೋದಿತ ಚಲನಚಿತ್ರ " ದಿ ಕೇರಳ ಸ್ಟೋರಿ" ಸಿನೆಮಾ ನೋಡಬೇಕೆಂದು, ಮತ್ತು ಅದಕ್ಕಾಗಿ ತರಗತಿಗಳನ್ನೂ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿರುವ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಕ್ಕೂ ಆಘಾತಕಾರಿ ಅಷ್ಟೇ ಅಲ್ಲ, ಕೋಮು ದಳ್ಳುರಿ ಹಚ್ಚುವ ಹುನ್ನಾರ ಎಂದು 'ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ' ಖಂಡನೆ ವ್ಯಕ್ತಪಡಿಸಿದೆ.
'ಇದು ಕಪೋಲ ಕಲ್ಪಿತ ಮಾತ್ರವಲ್ಲ, ದೇಶದ ಸೌಹಾರ್ದ ಪರಂಪರೆಯನ್ನು ಹಾಳು ಮಾಡುವ ವ್ಯವಸ್ಥಿತ ಸಂಚು ಎಂಬುದು ಜಗಜ್ಜಾಹೀರು ಆಗಿದೆ. ಹೀಗಿರುವಾಗಲೂ ಇಂಥದ್ದೊಂದು ಸಿನಿಮಾ ಉಚಿತವಾಗಿ ಎಲ್ಲಕ್ಕಿಂತ ಹೆಚ್ಚಾಗಿ ಕಡ್ಡಾಯವಾಗಿ ವಿದ್ಯಾರ್ಥಿಗಳು ವೀಕ್ಷಿಸುವಂತೆ ಮಾಡುತ್ತಿರುವ ಉದ್ದೇಶವಾದರೂ ಏನು? ಯಾವತ್ತೂ ಸರ್ವರ ಯೋಗಕ್ಷೇಮ ಬಯಸುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಇದನ್ನು ತೀವ್ರವಾಗಿ ಖಂಡಿಸುತ್ತದೆ' ಎಂದು ಜನವಾದಿ ಮಹಿಳಾ ಸಂಘಟನೆಯು ಪ್ರಕಟನೆಯಲ್ಲಿ ತಿಳಿಸಿದೆ.