ರಾಮನಗರ: ಶಾಲಾ ಬಸ್‌ನಿಂದ ಬಿದ್ದು ಬಾಲಕಿ ಸಾವು
Update: 2023-01-10 05:13 GMT
ರಾಮನಗರ, ಜ.10: ಶಾಲಾ ಬಸ್‌ನಿಂದ ಕೆಳಗೆ ಬಿದ್ದು 5 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿಯ ಪಿಚ್ಚನಕೆರೆಯಲ್ಲಿ ಸೋಮವಾರ ಸಂಜೆ ವರದಿಯಾಗಿದೆ.
ಕನಕಪುರ ತಾಲೂಕಿನ ಸಿದ್ದೇಗೌಡಹಳ್ಳಿ ಗ್ರಾಮದ ನಿವಾಸಿ ಸ್ವಾಮಿ ಅವರ ಪುತ್ರಿ ರಕ್ಷಾ (5) ಸಾವನ್ನಪ್ಪಿರುವ ಬಾಲಕಿ ಎಂದು ತಿಳಿದು ಬಂದಿದೆ.
ಬಿಡದಿ ಬಳಿಯ ಖಾಸಗಿ ಶಾಲೆಯಲ್ಲಿ ಬಾಲಕಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದಳು. ಸೋಮವಾರ ಸಂಜೆ ಬಾಲಕಿ ಎಂದಿನಂತೆ ಶಾಲೆ ಮುಗಿಸಿ ಬಸ್‌ನಲ್ಲಿ ಬರುತ್ತಿದ್ದ ವೇಳೆ ಶಾಲಾ ಬಸ್ ಸಿಬ್ಬಂದಿ ಬಾಗಿಲು ಹಾಕಿರದ ಹಿನ್ನೆಲೆಯಲ್ಲಿ ತಿರುವಿನಲ್ಲಿ ಆಕೆ ಬಸ್‌ನಿಂದ ಕೆಳಗೆ ಬಿದ್ದಿದ್ದಾಳೆನ್ನಲಾಗಿದೆ. ಬಸ್ ಹಿಂದಿನ ಚಕ್ರ ತಲೆಯ ಮೇಲೆ ಹತ್ತಿದ್ದು, ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬಸ್ ಸಿಬ್ಬಂದಿ ವಿರುದ್ಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.