ಉಡುಪಿ: ಪರ್ಕಳ- ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 4,214 ಮರಗಳು ಬಲಿ!
ಆಕ್ಷೇಪಣೆಗೆ ನಿರಾಸಕ್ತಿ: ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ
ಉಡುಪಿ: ಜಿಲ್ಲೆಯ ಪರ್ಕಳದಿಂದ ಹೆಬ್ರಿವರೆಗಿನ ರಾಷ್ಟ್ರೀಯ ಹೆದ್ದಾರಿ 169 ಎ ಅಭಿವೃದ್ಧಿ ಕಾಮಗಾರಿಗೆ ಒಟ್ಟು 4214 ಮರಗಳು ಬಲಿಯಾಗಲಿವೆ. ಈ ಕುರಿತು ಅರಣ್ಯ ಇಲಾಖೆಯು ಅಂತಿಮ ಸಿದ್ಧತೆಯನ್ನು ನಡೆಸುತ್ತಿದೆ.
ಪರ್ಕಳದಿಂದ ಹಿರಿಯಡ್ಕ, ಶಿವಪುರ ಮಾರ್ಗವಾಗಿ ಹೆಬ್ರಿಯ ಮೂಲಕ ಪಶ್ಚಿಮಘಟ್ಟವನ್ನು ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿ ದಟ್ಟ ಅರಣ್ಯ ಪ್ರದೇಶದ ಮಧ್ಯೆ ಸಾಗುತ್ತಿದೆ. ಇದೀಗ ಈ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮರಗಳು ಧರೆಗೆ ಉರುಳಲಿವೆ.
ಉಡುಪಿ ನಗರಸಭೆ ವ್ಯಾಪ್ತಿಯ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ 205, ಬೊಮ್ಮಾರಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ 997, ಪೆರ್ಡೂರು ಗ್ರಾಪಂ ವ್ಯಾಪ್ತಿಯ ಮುಳ್ಳುಗುಡ್ಡೆಯಿಂದ ತಾಣದಮನೆವರೆಗೆ 1,549, ಶಿವಪುರ ಗ್ರಾಪಂ ವ್ಯಾಪ್ತಿ ಯಲ್ಲಿ 580, ಹೆಬ್ರಿ ಗ್ರಾಪಂ ವ್ಯಾಪ್ತಿಯಲ್ಲಿ 861 ಮರಗಳನ್ನು ಕಡಿಯಲು ಸಿದ್ಧತೆ ನಡೆಯುತ್ತಿದೆ.
ಸಾರ್ವಜನಿಕರ ನಿರಾಸಕ್ತಿ: ಈ ಸಂಬಂಧ ಅರಣ್ಯ ಇಲಾಖೆಯು ಸಾರ್ವಜನಿಕ ಅಹವಾಲು ಸಭೆಯನ್ನು ಕರೆದಿದ್ದರೂ ಯಾರೂ ಕೂಡ ಭಾಗವಹಿಸಿರಲಿಲ್ಲ. ಹೆಬ್ರಿ ವಲಯ ಕಚೇರಿಯಲ್ಲಿ ಮತ್ತೊಂದು ಸಭೆಯನ್ನು ಕೂಡ ಕರೆಯಲಾಗಿತ್ತು. ಇದರಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಪಾಲ್ಗೊಂಡಿದ್ದರು.
‘ಮರಗಳ ತೆರವಿನ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಸಿದರೂ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ಆದರೆ ಹೆಬ್ರಿ ಗ್ರಾಪಂ ವ್ಯಾಪ್ತಿಯ 861 ಹಾಗೂ ಶಿವಪುರ ಗ್ರಾಪಂ ವ್ಯಾಪ್ತಿಯ 580 ಮರಗಳನ್ನು ಕಡಿಯಲು ಆನ್ ಲೈನ್‌ನಲ್ಲಿ 200 ಆಕ್ಷೇಪಣೆಗಳು ಬಂದಿವೆ. ಪೆರ್ಡೂರು ಗ್ರಾಪಂ ವ್ಯಾಪ್ತಿಯ 1,549 ಮರಗಳ ತೆರವಿಗೆ ಯಾವುದೇ ಆಕ್ಷೇಪಗಳಿಲ್ಲ’ ಎಂದು ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ನಾಯ್ಕ್ ತಿಳಿಸಿದ್ದಾರೆ.
ಅದೇ ರೀತಿ ಆದಿಉಡುಪಿ-ಮಲ್ಪೆ ವ್ಯಾಪ್ತಿಯ 205 ಮರಗಳು, ಹಿರಿಯಡ್ಕ ಗ್ರಾಪಂ ವ್ಯಾಪ್ತಿಯ 997 ಮರಗಳನ್ನು ತೆರವು ಮಾಡುವುದರ ವಿರುದ್ಧ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ಉಡುಪಿ ನಗರ ವ್ಯಾಪ್ತಿಯಲ್ಲಿ 22 ಮರಗಳನ್ನು ಕಡಿಯಲು ಸಾರ್ವಜನಿಕ ವಿಚಾರಣೆ ನಡೆದಿಲ್ಲ ಯಾಕೆಂದರೆ 50ಕ್ಕೂ ಹೆಚ್ಚು ಮರಗಳನ್ನು ಕಡಿಯುವಾಗ ಮಾತ್ರ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಬೇಕಾಗುತ್ತದೆ. ಹೆಬ್ರಿ ವ್ಯಾಪ್ತಿಯ 200 ಆಕ್ಷೇಪಣೆಗಳ ಬಗ್ಗೆ ಹೆಬ್ರಿ ವಲಯ ಅರಣ್ಯಾಧಿಕಾರಿಗಳು ಪರಿಶೀಲಿಸಿ ಸರ್ವೆ ನಡೆಸಿ ವರದಿ ಸಲ್ಲಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಎರಡು ವಿಭಾಗಗಳಲ್ಲಿ ಕಾಮಗಾರಿ
ಮಲ್ಪೆ- ತೀರ್ಥಹಳ್ಳಿ 169ಎ ಇದರ ಚತುಷ್ಪಥ ರಸ್ತೆ ಕಾಮಗಾರಿಗೆ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಅದಕ್ಕಾಗಿ ಮಲ್ಪೆ- ಕರಾವಳಿ ಜಂಕ್ಷನ್ ಮತ್ತು ಪರ್ಕಳ- ಹೆಬ್ರಿವರೆಗೆ ಎರಡು ವಿಭಾಗಗಳಲ್ಲಿ ಕಾಮಗಾರಿ ನಡೆಯಲಿದೆ.
ಪ್ರಸ್ತುತ ಈ ರಸ್ತೆಯು 26.42 ಕಿಲೋ ಮೀಟರ್ ಉದ್ದವಿದೆ. ಕುಂಜಿಬೆಟ್ಟುವಿ ನಿಂದ ಪರ್ಕಳದವರೆಗಿನ ಎಂಟು ಕಿ.ಮೀ. ರಸ್ತೆ ಈಗಾಗಲೇ ಪೂರ್ಣಗೊಂಡಿದೆ. ಈ ಯೋಜನೆಯ ಭಾಗವಾಗಿ ಕಲ್ಮಾಡಿ ಹೊಳೆ, ಹೆಬ್ರಿಯ ಸೀತಾ ನದಿ ಮತ್ತು ಪೆರ್ಡೂರಿನಲ್ಲಿ ಸ್ವರ್ಣಾ ನದಿಗೆ ಅಡ್ಡಲಾಗಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ 355.72 ಕೋಟಿ ರೂ. ವೆಚ್ಚವಾಗಲಿದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಪುರದಲ್ಲಿ 3.74 ಕಿ.ಮೀ., ಹೆಬ್ರಿಯಲ್ಲಿ 3.38 ಕಿ.ಮೀ., ಹಿರಿಯಡ್ಕದಲ್ಲಿ 7.960ಕಿ.ಮೀ., ಆದಿ ಉಡುಪಿಯಿಂದ ಮಲ್ಪೆಗೆ 3.7 ಕಿ.ಮೀ., ಉಡುಪಿ ನಗರ ವ್ಯಾಪ್ತಿಯಲ್ಲಿ 0.040ಕಿ.ಮೀ. ಮತ್ತು ಪೆರ್ಡೂರಿನಲ್ಲಿ 7.24 ಕಿ.ಮೀ. ಉದ್ದದಲ್ಲಿ ಕಾಮಗಾರಿ ನಡೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ನಾಗರಾಜ್ ನಾಯ್ಕ್ ತಿಳಿಸಿದ್ದಾರೆ.
ಒಂದು ಮರಕ್ಕೆ ಬದಲು 10 ಗಿಡ!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ಅಭಿವೃದ್ಧಿಗಾಗಿ ಮರ ಕಡಿಯಲು ಸಾಕಷ್ಟು ನಿಯಮಾವಳಿಗಳನ್ನು ಪಾಲಿಸಬೇಕು. ಅರಣ್ಯ ಇಲಾಖೆ, ಪ್ರಾಧಿಕಾರ ಜಂಟಿ ಸಮೀಕ್ಷೆ ನಡೆಸಿ ಮರಗಳನ್ನು ಗುರುತಿಸಬೇಕು. ಬಳಿಕ ಸಾರ್ವಜನಿಕ ಅಹವಾಲು ಸಭೆ ಕರೆದು ಸಾರ್ವಜನಿಕರ ಆಕ್ಷೇಪ ಇಲ್ಲದ ವರದಿ ಪರಿಗಣಿಸಿ, ಅರಣ್ಯ ಇಲಾಖೆಯು ಹೆದ್ದಾರಿ ಇಲಾಖೆಗೆ ಮರ ಕಡಿಯಲು ನೀಡಬೇಕು.
ಮರ ಕಡಿಯುವ ಮೊದಲು ಅರಣ್ಯೀಕರಣ ವೆಚ್ಚವನ್ನು ಪ್ರಾಧಿಕಾರ ಅರಣ್ಯ ಇಲಾಖೆಗೆ ಪಾವತಿಸಬೇಕು. ಒಂದು ಮರ ಕಡಿದಲ್ಲಿ 10 ಮರ ನೆಡಬೇಕು ಎಂಬ ನಿಯಮದಂತೆ ಒಂದು ಮರಕ್ಕೆ 411.27ರೂ.ನಂತೆ 10 ಪಟ್ಟು ವೆಚ್ಚವನ್ನು ಪಾವತಿಸಬೇಕು. ಅಲ್ಲದೆ ಮರಗಳನ್ನು ನೆಡಲು, ಮರು ನೆಡಲು ಮತ್ತು ಸ್ಥಳಾಂತರಿಸಲು ಪ್ರತಿ ಕಿಲೋಮೀಟರ್‌ಗೆ ಹೆಚ್ಚುವರಿ 9,06,050ರೂ. ಪಾವತಿಸ ಬೇಕು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.