ಯುದ್ಧ ಮತ್ತು ಶುದ್ಧ ಸುಳ್ಳುಗಳು

Update: 2023-01-18 08:12 GMT

ಜಾಹೀರಾತು ಅಭಿಯಾನ, ಮಾರ್ಕೆಟಿಂಗ್ ಯೋಜನೆಗಳ ಗುರಿ ಸದಾ ಸಾರ್ವಜನಿಕ ಅಭಿಪ್ರಾಯವೇ ಆಗಿರುತ್ತದೆ. ಯುದ್ಧಗಳನ್ನು ಕೂಡ ಕಾರುಗಳನ್ನು ಬಿಕರಿ ಮಾಡುವಂತೆಯೇ ಸುಳ್ಳು ಹೇಳಿ ಮಾರಾಟ ಮಾಡಲಾಗುತ್ತದೆ. ಟೋನ್ಕಿನ್ ಕೊಲ್ಲಿಯಲ್ಲಿ ಯುಎಸ್ ಯುದ್ಧ ನೌಕೆಗಳ ಮೇಲೆ ವಿಯೆಟ್ನಾಂನವರು ದಾಳಿ ಮಾಡುತ್ತಿದ್ದಾರೆಂದು ಅಮೆರಿಕದ ಅಧ್ಯಕ್ಷ ಲಿಂಡನ್ ಜಾನ್ಸನ್ 1984ರ ಆಗಸ್ಟ್‌ನಲ್ಲಿ ಆರೋಪಿಸಿದರು. ಇದಾದ ನಂತರ ಅಮೆರಿಕದ ಅಧ್ಯಕ್ಷ ವಿಯೆಟ್ನಾಂ ದೇಶದೊಳಕ್ಕೆ ಸೇನಾಪಡೆ ಮತ್ತು ಯುದ್ಧ ವಿಮಾನಗಳನ್ನು ನುಗ್ಗಿಸಿ ಆಕ್ರಮಣ ನಡೆಸಿದರು. ಪತ್ರಕರ್ತರು, ರಾಜಕಾರಣಿಗಳು ಅಧ್ಯಕ್ಷರನ್ನು ಹಾಡಿ ಹೊಗಳಿದರು, ತಮ್ಮ ಮೆಚ್ಚುಗೆಯ ಮೊಹರು ಹಾಕಿದರು. ಅಧ್ಯಕ್ಷರ ಜನಪ್ರಿಯತೆ ಆಗಸಕ್ಕೆ ರಾಕೆಟ್‌ನಂತೆ ಜಿಗಿಯಿತು. ಅಧಿಕಾರದಲ್ಲಿದ್ದ ಡೆಮೋಕ್ರಾಟ್‌ಗಳು, ಅಧಿಕಾರ ಕಳೆದುಕೊಂಡಿದ್ದ ರಿಪಬ್ಲಿಕನ್ನರು ಒಂದೇ ಪಕ್ಷದವರಂತಾಗಿ ಆಕ್ರಮಣಕಾರಿ ಕಮ್ಯುನಿಸ್ಟರ ವಿರುದ್ಧ ಸೆಟೆದುನಿಂತರು.

ಬಹುಸಂಖ್ಯೆಯಲ್ಲಿ ವಿಯೆಟ್ನಾಂ ಜನರ ಮಾರಣ ಹೋಮದ ನಂತರ (ಪ್ರಾಣ ಕಳೆದುಕೊಂಡವರಲ್ಲಿ ಬಹುಪಾಲು ಮುಗ್ದ ಮಕ್ಕಳು ಮತ್ತು ಹೆಂಗಸರಿದ್ದರು) ಜಾನ್ಸನ್ ರಕ್ಷಣಾ ಕಾರ್ಯದರ್ಶಿಯಾಗಿದ್ದ ರಾಬರ್ಟ್ ಮ್ಯಾಕ್ ನಮಾರ ಟೋನ್ಕಿನ್ ಕೊಲ್ಲಿಯಲ್ಲಿ ಯಾವ ದಾಳಿಯು ಆಗಿಲ್ಲವೆಂದು ಒಪ್ಪಿಕೊಂಡ!

ಸತ್ತವರು ಮರಳಿ ಬರಲಿಲ್ಲ.

ಮಾರ್ಚ್ 2003, ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಇರಾಕ್ ಬಳಿ ವಿನಾಶಕಾರಿ ಶಸ್ತ್ರಾಸ್ತ್ರಗಳಿವೆ. ಇಡೀ ಜಗತ್ತನ್ನೇ ನಾಶ ಮಾಡಲು ಇರಾಕ್ ಸನ್ನದ್ಧವಾಗಿದೆ ಎಂದು ಆರೋಪಿಸಿದರು. ನಾವೆಂದೂ ಕೇಳರಿಯದ ಮಾರಕ ಶಸ್ತ್ರಾಸ್ತ್ರಗಳವು ಎಂದು ಪ್ರತಿನಿತ್ಯ ಬೊಬ್ಬೆ ಹೊಡೆದುಕೊಂಡರು.

ಇದಾದ ನಂತರ ಅಮೆರಿಕ ಇರಾಕಿನೊಳಕ್ಕೆ ಸೇನಾಪಡೆ ಮತ್ತು ಯುದ್ಧ ವಿಮಾನಗಳನ್ನು ನುಗ್ಗಿಸಿ ಅಲ್ಲಿಯೂ ಆಕ್ರಮಣ ನಡೆಸಿತು. ಪತ್ರಕರ್ತರು, ರಾಜಕಾರಣಿಗಳು ಎಂದಿನಂತೆ ಹಾಡಿ ಹೊಗಳಿದರು,

ಬಹುಸಂಖ್ಯೆಯಲ್ಲಿ ಇರಾಕಿ ಜನರ ಮಾರಣ ಹೋಮದ ಆನಂತರ ಇರಾಕ್ ಬಳಿ ಎಂದಿಗೂ ಯಾವುದೇ ವಿನಾಶಕಾರಿ ಶಸ್ತ್ರಾಸ್ತ್ರಗಳು ಇರಲೇ ಇಲ್ಲವೆಂದು ಜಾರ್ಜ್ ಡಬ್ಲ್ಯು ಬುಷ್ ತಿಳಿಸಿದರು. ‘‘ನಾವೆಂದೂ ಕೇಳರಿಯದ ಮಾರಕ ಶಸ್ತ್ರಾಸ್ತ್ರಗಳು’’ ಬುಷ್‌ನ ಪ್ರಚೋದನಾಕಾರಿ ಮಾತುಗಳೇ ಆಗಿದ್ದವು. ಮುಂದಿನ ಚುನಾವಣೆಯಲ್ಲಿ ಬುಷ್ ವಿಜಯಿಯಾಗಿ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷನಾದರು. ಸುಳ್ಳುಗಳಿಗೆ ಕಾಲಿಲ್ಲವೆಂದು ನನ್ನ ಬಾಲ್ಯದಲ್ಲಿ ಅವ್ವ ಹೇಳುತ್ತಿದ್ದಳು, ಅದು ಅವಳ ತಪ್ಪುತಿಳುವಳಿಕೆಯಾಗಿತ್ತು.

Similar News

ಜಗದಗಲ
ಜಗ ದಗಲ