ಹಿರಿಯ ಸಮಾಜವಾದಿ ಪ‌.ಮಲ್ಲೇಶ್ ಹೃದಯಾಘಾತದಿಂದ ನಿಧನ

Update: 2023-01-19 12:02 GMT

ಮೈಸೂರು: ಹಿರಿಯ ಸಮಾಜವಾದಿ, ಹೋರಾಟಗಾರ ಪ.ಮಲ್ಲೇಶ್ (85)  ಹೃದಯಾಘಾತದಿಂದ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ತಮ್ಮ ನಿವಾಸ ರಾಮಕೃಷ್ಣ ನಗರದಲ್ಲಿ ಇಂದು ಮಧ್ಯಾಹ್ನ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಾಗಲೇ ಅವರು ನಿಧನರಾಗಿರುವ ವಿಚಾರವನ್ನು ವೈದ್ಯರು ದೃಢಪಡಿಸಿದ್ದಾರೆ.

ಪ.ಮಲ್ಲೇಶ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಇವರು ಸಮಾಜದಲ್ಲಿನ ಅಸಮಾನತೆ, ಕೋಮುವಾದ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದರು. 

ಮೈಸೂರಿನಲ್ಲಿ ನಡೆಯುವ ಯಾವುದೇ ಪ್ರಗತಿಪರ ಚಳುವಳಿಗಳಲ್ಲಿ ಅವರು ಮುಂಚೂಣಿಯಲ್ಲಿರುತ್ತಿದ್ದರು.

ಸಿದ್ದರಾಮಯ್ಯ ಸಂತಾಪ: ಹಿರಿಯ ಸಮಾಜವಾದಿ ಚಿಂತಕ, ಪ್ರಗತಿಪರ ಹೋರಾಟಗಾರ ಮತ್ತು ನನ್ನ ಬಹುಕಾಲದ ಆತ್ಮೀಯ ಸ್ನೇಹಿತ ಪ.ಮಲ್ಲೇಶ್ ಅವರ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಅವರ ಸಾವು ಕರ್ನಾಟಕದ ಪಾಲಿಗೆ ತುಂಬಲಾರದ ನಷ್ಟ. ಮಲ್ಲೇಶ್ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 

Similar News