ಕಿವೀಸ್ ವಿರುದ್ಧ ಭಾರತಕ್ಕೆ 90 ರನ್ ಜಯ; ಸರಣಿ 3-0 ಅಂತರದಿಂದ ಕೈವಶ

Update: 2023-01-24 15:37 GMT

   ಇಂದೋರ್, ಜ.24: ರೋಹಿತ್ ಶರ್ಮಾ, ಶುಭಮನ್ ಗಿಲ್ ಶತಕ, ಶಾರ್ದೂಲ್ ಠಾಕೂರ್(3-45), ಕುಲದೀಪ್ ಯಾದವ್(3-62) ಹಾಗೂ ಯಜುವೇಂದ್ರ ಚಹಾಲ್(2-43) ಕರಾರುವಾಕ್ ಬೌಲಿಂಗ್ ನೆರವಿನಿಂದ ನ್ಯೂಝಿಲ್ಯಾಂಡ್ ವಿರುದ್ಧದ 3ನೇ ಏಕದಿನ ಪಂದ್ಯವನ್ನು ಭಾರತವು 90 ರನ್‌ನಿಂದ ಗೆದ್ದುಕೊಂಡಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಜಯಿಸಿ ಕ್ಲೀನ್‌ಸ್ವೀಪ್ ಮಾಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 386 ರನ್ ಗುರಿ ಬೆನ್ನಟ್ಟಿದ ಕಿವೀಸ್ ತಂಡ 41.2 ಓವರ್‌ಗಳಲ್ಲಿ 295 ರನ್‌ಗೆ ಆಲೌಟಾಯಿತು. ಕಿವೀಸ್ ಪರ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ(138 ರನ್, 100 ಎಸೆತ, 12 ಬೌಂಡರಿ, 8 ಸಿಕ್ಸರ್)ಹಾಗೂ ಹೆನ್ರಿ ನಿಕೊಲ್ಸ್(42 ರನ್, 40 ಎಸೆತ)2ನೇ ವಿಕೆಟಿಗೆ 106 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಕುಸಿತದ ಹಾದಿ ಹಿಡಿತ ಕಿವೀಸ್ 295 ರನ್‌ಗೆ ಆಲೌಟಾಯಿತು.

ಮಿಚೆಲ್ ಸ್ಯಾಂಟ್ನರ್(34 ರನ್), ಮೈಕಲ್ ಬ್ರೆಸ್‌ವೆಲ್ (26 ರನ್), ಡರ್ಲ್ ಮಿಚೆಲ್(24)ಎರಡಂಕೆಯ ಸ್ಕೋರ್ ಗಳಿಸಿದರು.

 ರೋಹಿತ್, ಶುಭಮನ್ ಶತಕ, ಭಾರತ 385/9: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ ಕ್ರಿಕೆಟ್ ತಂಡ ಶುಭಮನ್ ಗಿಲ್(112 ರನ್, 78 ಎಸೆತ)ಹಾಗೂ ರೋಹಿತ್ ಶರ್ಮಾ(101 ರನ್, 85 ಎಸೆತ)ಶತಕ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(54 ರನ್, 38 ಎಸೆತ)ಅರ್ಧಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿತು.

Similar News