ಐಟಿ ಎಂಬ ನೀರ ಮೇಲಣ ಗುಳ್ಳೆ

Update: 2023-01-28 08:38 GMT

ದಿನ ಬೆಳಗಾಗುವುದರೊಳಗೆ ಸಿಲಿಕಾನ್ ವ್ಯಾಲಿಯಲ್ಲಿ ಹಿರೋಗಳಾಗಿದ್ದ ಗೂಗಲ್ ನ ಸುಂದರ್ ಪಿಚೈ ಹಾಗೂ ಮೈಕ್ರೋಸಾಫ್ಟ್ ನ ಸತ್ಯ ನಾದೆಲ್ಲಾ ವಿಲನ್ ಆಗಿಬಿಟ್ಟಿದ್ದಾರೆ. ನಿನ್ನೆ ಮೊನ್ನೆವರೆಗೆ ಅವರನ್ನು ಐಟಿ ಕ್ಷೇತ್ರದ ಸೂಪರ್ ಸ್ಟಾರ್ ಗಳು, ಎಲ್ಲರಿಗೂ ಮಾದರಿ ಅವರು ಎಂದು ಹಾಡಿ ಹೊಗಳುತ್ತಿದ್ದವರು ಈಗ ಅವರಿನ್ನೂ ಯಾಕೆ ಹುದ್ದೆಯಲ್ಲಿದ್ದಾರೆ, ಅವರನ್ನು ಕೂಡಲೇ ವಜಾ ಮಾಡಿ, ಇಷ್ಟಕ್ಕೆಲ್ಲ ಅವರೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆಲ್ಲ ಕಾರಣ ಗೂಗಲ್ ದಿಢೀರನೆ ೧೨ ಸಾವಿರ ನೌಕರರನ್ನು ವಜಾಗೊಳಿಸುವ ನಿರ್ಧಾರ ಘೋಷಿಸಿದ್ದು. ಅದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಅಲ್ಲಿಗೆ, ನಿನ್ನೆಯವರೆಗೂ ರೋಲ್ ಮಾಡೆಲ್ ಸಿಇಒ ಆಗಿದ್ದ ಸುಂದರ್ ಪಿಚೈ ಅಸಮರ್ಥ ಆಡಳಿತಾಧಿಕಾರಿ ಎಂಬ ಹಣೆಪಟ್ಟಿ ಪಡೆಯುವಂತಾಗಿದೆ.

ದೇಶದೊಳಗೆ ದೊಡ್ಡ ಮಟ್ಟದಲ್ಲಿ ನಿರುದ್ಯೋಗವಿದ್ದು, ಯುವಕರು ಕೆಲಸವಿಲ್ಲದೆ ಕಂಗಾಲಾಗುತ್ತಿದ್ದರೆ, ಐಟಿ ವಲಯದ ಆಕರ್ಷಕ ಸಂಬಳ ನೆಚ್ಚಿ ವಿದೇಶಕ್ಕೆ ಹೋದವರೂ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಐಟಿ ಎಂಬ ನೀರ ಮೇಲಣ ಗುಳ್ಳೆ ಯಾವ ಕ್ಷಣದಲ್ಲಿ ಒಡೆದುಹೋಗಿ, ಸಾವಿರಾರು ಮಂದಿಗೆ ನಿನ್ನೆಯಿದ್ದ ಒಳ್ಳೆಯ ಕೆಲಸ ಇಂದಿಲ್ಲವೆನ್ನುವಂತಾಗುತ್ತದೊ ಎಂಬ ಸ್ಥಿತಿ ಬಂದುಬಿಟ್ಟಿದೆ. ಈ ದೇಶದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರ ಎದುರು ಭ್ರಮೆಗಳನ್ನೇ ತೆರೆಯುವ ಐಟಿ ಕ್ಷೇತ್ರ ರಾತ್ರಿ ಕಳೆದು ಬೆಳಗಾಗುವುದರೊಳಗೆ ವಿಲನ್ ರೀತಿಯಲ್ಲಿ ಗೇಟಿನಲ್ಲಿ ನಿಂತು ನೆಚ್ಚಿಕೊಂಡಿದ್ದ ಉದ್ಯೋಗಿಯನ್ನು ಆಚೆ ನೂಕಿಬಿಡಬಹುದು. ಇಡೀ ಜಗತ್ತೇ ತನ್ನ ಅಂಗೈಯಲ್ಲಿದೆ ಎಂದುಕೊಂಡಿದ್ದವನು ಏನೂ ಇಲ್ಲದಂತಾಗಿ ಬೀದಿಗೆ ಬಂದು ನಿಲ್ಲುವಂತಾಗಿಬಿಡಬಹುದು. ಅಂಥ ಅನಿಶ್ಚಿತತೆ ಇಂದು ಅಮೆರಿಕದಲ್ಲಿ ಸಾವಿರಾರು ಭಾರತೀಯರನ್ನು ಕಾಡುತ್ತಿದೆ.

ಟ್ವಿಟರ್ ನಂತರ ಸಾಲುಸಾಲಾಗಿ ಮೆಟಾ, ಅಮೆಝಾನ್, ಇತ್ತೀಚೆಗೆ ಮೈಕ್ರೋಸಾಫ್ಟ್ ಕೂಡ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕಿತ್ತುಹಾಕಿದ್ದವು. ಈಗ ಗೂಗಲ್ ಕೂಡ ಅದನ್ನೇ ಮಾಡಿದೆ. ಜಗತ್ತಿನ ಟೆಕ್ ದೈತ್ಯ ಗೂಗಲ್ ಕಂಪೆನಿ ಹೀಗೆ ಮಾಡಲಿಕ್ಕಿಲ್ಲ ಎಂದೇ ಅಂದುಕೊಂಡಿದ್ದರು ಐಟಿ ವಲಯದ ಮಂದಿ. ಆದರೆ ಆ ನಿರೀಕ್ಷೆ ಕೂಡ ಸುಳ್ಳಾಗಿದೆ. ಹಾಗಾಗಿ ಐಟಿ ವಲಯದಲ್ಲಿ ಹತಾಶೆ, ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ.

ಐಟಿ ಉದ್ಯೋಗ ಎನ್ನುವುದು ನೆಟ್ ಫ್ಲಿಕ್ಸ್‌ನ ಸ್ಕ್ವಿಡ್ ಗೇಮ್‌ನ ಹಾಗೆ ಆಗಿಬಿಟ್ಟಿದೆ. ನಿನ್ನೆ ಕೆಲಸ ಮಾಡುತ್ತಿದ್ದ ಕಚೇರಿಗೆ ಇಂದು ಪ್ರವೇಶ ಇಲ್ಲವಾ ಗುತ್ತಿದೆ. ತಾನು ಕೆಲಸದಲ್ಲಿದ್ದೇನೆಯೇ ಇಲ್ಲವೆ ಎಂಬುದೂ ಗೊತ್ತಾಗದಂಥ ಅಯೋಮಯ ಸನ್ನಿವೇಶ. ಕಚೇರಿಯ ಪ್ರವೇಶ ಬಾಗಿಲಲ್ಲಿ ಕ್ಯೂನಲ್ಲಿ ನಿಂತು ಸಾಗುತ್ತಿದ್ದರೆ, ಕೈಯಲ್ಲಿರುವ ಅಕ್ಸೆಸ್ ಪಾಸ್ ಹಸಿರು ತೋರಿಸಿದರೆ ಒಳಹೋಗಬಹುದು. ಒಂದು ವೇಳೆ ಕೆಂಪು ಬಣ್ಣ ತೋರಿಸಿದರೆ ಅವರ ಪಾಲಿಗೆ ಅಲ್ಲಿದ್ದ ಉದ್ಯೋಗದ ಬಾಗಿಲು ಮುಚ್ಚಿದೆ ಎಂದರ್ಥ. ಅಷ್ಟರ ಮಟ್ಟಿಗೆ ಕೆಲಸ ಕಿತ್ತುಕೊಳ್ಳುವ ರೀತಿ ಕೂಡ ಸಂವೇದನಾ ರಹಿತವಾಗಿದೆ. ಭಾವನೆಗಳಿಗೆ ಅಲ್ಲಿ ಜಾಗವೇ ಇಲ್ಲ . ಗೂಗಲ್‌ನ ನ್ಯೂಯಾರ್ಕ್ ಕಚೇರಿಯ ಉದ್ಯೋಗಿಗಳು ಅಕ್ಷರಶಃ ಇಂಥ ಕರಾಳ ದಿನಕ್ಕೆ ಸಾಕ್ಷಿಯಾದರು ಎಂಬುದು ನಿಜಕ್ಕೂ ಭಯಂಕರ ವಾಸ್ತವ.

ತಾನು ಉಳಿಯಲು ತನ್ನನ್ನು ನೆಚ್ಚಿರುವ ಉದ್ಯೋಗಿಗಳನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಕ್ಷಣಮಾತ್ರದಲ್ಲಿ ಹೊರಹಾಕಿಬಿಡಬಲ್ಲವು ಐಟಿ ವಲಯದ ದೈತ್ಯ ಕಂಪೆನಿಗಳು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಇದೆಲ್ಲದರ ಪರಿಣಾಮ ಅಮೆರಿಕದಲ್ಲಿರೋ ಭಾರತೀಯ ಐಟಿ ವೃತ್ತಿಪರರು ನಿರುದ್ಯೋಗಿಗಳಾಗುತ್ತಿದ್ದಾರೆ. ಕೈಯಲ್ಲಿದ್ದ ಉದ್ಯೋಗ ಹೋದುದು ಒಂದೆಡೆಯಾದರೆ, ಉದ್ಯೋಗದ ಕಾರಣದಿಂದಾಗಿಯೇ ಪಡೆದಿರುವ ವೀಸಾ ಅವಧಿಯೂ ಮುಗಿದುಹೋಗುವ ಆತಂಕ ಮತ್ತೊಂದು ಕಡೆ. ಅಷ್ಟರೊಳಗೆ ಹೊಸ ಉದ್ಯೋಗ ಹುಡುಕಿಕೊಳ್ಳಲೇಬೇಕಾದ ಅನಿವಾರ್ಯತೆ.

ವಾಶಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಕಳೆದ ನವೆಂಬರಿನಿಂದ ಸುಮಾರು ೨ ಲಕ್ಷ ಭಾರತೀಯ ಐಟಿ ವೃತ್ತಿಪರರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರ ಪೈಕಿ ಶೇ.೩೦ರಿಂದ ೪೦ರಷ್ಟು ಮಂದಿ ಅಮೆರಿಕದ ಉದ್ಯೋಗ ವೀಸಾ ಎಚ್‌೧ಬಿ ಹಾಗೂ ಎಲ್‌೧ ವೀಸಾ ಹೊಂದಿರುವವರು. ಎಚ್‌೧ಬಿ ಎಂಬುದು ವಲಸೆ ರಹಿತ ವೀಸಾ. ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶಿ ವೃತ್ತಿಪರರಿಗೆ ಕೊಡಲಾಗುತ್ತದೆ. ಎಲ್‌೧ ವೀಸಾ ಅಲ್ಲಿನ ವ್ಯವಸ್ಥಾಪಕ ಹುದ್ದೆಗಳಲ್ಲಿ ಇರುವವರಿಗೆ ಕೊಡುವಂಥದ್ದು. ಈ ವೀಸಾಗಳ ಪ್ರಕಾರ, ಉದ್ಯೋಗ ಇದ್ದರೆ ಮಾತ್ರವೇ ಅಮೆರಿಕದಲ್ಲಿ ಇರಲು ಅವಕಾಶ. ಹೀಗಾಗಿ ಉದ್ಯೋಗ ಕಳೆದುಕೊಂಡವರು ೬೦ ದಿನಗಳೊಳಗೆ ಅಂಥದೇ ಬೇರೆ ಉದ್ಯೋಗ ಹುಡುಕಿಕೊಳ್ಳಲೇಬೇಕಾಗಿದೆ. ಆಗದೇ ಹೋದರೆ ಆನಂತರದ ಹತ್ತು ದಿನಗಳೊಳಗೆ ದೇಶ ಬಿಡಬೇಕಾಗುತ್ತದೆ. ಗೂಗಲ್‌ನಂತಹ ಕಂಪೆನಿಗಳೇ ಉದ್ಯೋಗಿಗಳಿಗೆ ಅಮೆರಿಕದ ಶಾಶ್ವತ ನಿವಾಸಿಯ ಸ್ಥಾನಮಾನ ಕೊಡುವ ಗ್ರೀನ್ ಕಾರ್ಡ್ ಸಿಗಲು ಬೇಕಾದ ಪ್ರಕ್ರಿಯೆ ನಿಲ್ಲಿಸಿಬಿಟ್ಟಿರುವುದು ಇಂಥ ಅತಂತ್ರ ಸ್ಥಿತಿಯನ್ನು ಹೆಚ್ಚಿಸಿದೆ.

ವಾಸ್ತವವೇನೆಂದರೆ, ಗೂಗಲ್‌ನಂಥ ಭಾರೀ ದೊಡ್ಡ ಕಂಪೆನಿಯೇ ಕೆಲಸದಿಂದ ತೆಗೆದುಹಾಕುತ್ತಿರುವ ದೇಶದಲ್ಲಿ ಬೇರೆ ಕಂಪೆನಿಗಳದ್ದೂ ಅದೇ ಸ್ಥಿತಿ. ಹಾಗಾಗಿ ಬಹುಪಾಲು ಕಂಪೆನಿಗಳಲ್ಲಿ ಉದ್ಯೋಗಾವಕಾಶವೇ ಇಲ್ಲ. ಕೆಲಸ ಕಳೆದುಕೊಂಡಿರುವ ಬಹಳಷ್ಟು ಭಾರತೀಯರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಎಂಬ ವರದಿಗಳಿವೆ. ಅಮೆರಿಕದಲ್ಲಿ ಇಷ್ಟು ಕಾಲ ಇದ್ದು ಗಳಿಸಿದ್ದ ಮನೆ, ಆಸ್ತಿಯನ್ನೆಲ್ಲ ಕಳೆದುಕೊಳ್ಳುವ ಸ್ಥಿತಿ ಎಷ್ಟೋ ಮಂದಿಗೆ ಎದುರಾಗಿದೆ. ಲಕ್ಷ ಲಕ್ಷಗಟ್ಟಲೆ ಎಣಿಸಿಕೊಂಡು ಹಾಯಾಗಿದ್ದವರು, ಐಷಾರಾಮಿ ಬದುಕಿಗೆ ಒಗ್ಗಿ ಹೋಗಿದ್ದವರು ಏನೇನೂ ಇರದಂತಾಗುವ ವಾಸ್ತವಕ್ಕೆ ಬೆಚ್ಚಿಬೀಳುವಂತಾಗಿರುವುದೇ ಈ ಐಟಿ ಅನ್ನೋ ಮಾಯಾಲೋಕ ತಂದಿಡುತ್ತಿರುವ ಅಪಾಯ.

ಕೆಲಸ ಕಳಕೊಂಡವರ ಸ್ಥಿತಿ ಹೀಗಿದ್ದರೆ ಕೆಲಸ ಉಳಿದಿರುವವರೂ ನೆಮ್ಮದಿಯಾಗಿಲ್ಲ. ಅವರನ್ನೂ ಅಭದ್ರತೆ ಕಾಡುತ್ತಿದೆ. ಮುಂದಿನ ಸರದಿ ನನ್ನದಾಗಬಹುದೇ ಎಂಬ ಭಯ ಶಾಶ್ವತ. ಸಾಲದ್ದಕ್ಕೆ ಈಗ ಕೆಲಸ ಕಳಕೊಂಡವರಲ್ಲಿ ಉತ್ತಮ ನಿರ್ವಹಣೆ ತೋರಿರುವವರೇ ಹೆಚ್ಚು. ಹಾಗಾಗಿ ಚೆನ್ನಾಗಿ ಕೆಲಸ ಮಾಡಿದವರಿಗೆ ಸಮಸ್ಯೆಯಾಗದು ಎಂಬ ಖಾತರಿಯೂ ಅಲ್ಲಿಲ್ಲ.

ಇದೆಲ್ಲವೂ ಐಟಿ ವಲಯ ಕೋವಿಡ್ ನಂತರ ಎದುರಿಸುತ್ತಿರುವ ವಿಚಿತ್ರ ಅತಂತ್ರತೆಯ ಪರಿಣಾಮ. ಕೋವಿಡ್ ನಂತರ ಎಲ್ಲವೂ ಸರಿಹೋಗಬಹುದು ಎಂದೇ ನಂಬಲಾಗಿತ್ತು. ಆ ಭ್ರಮೆಯೂ ಒಡೆದಿದೆ. ಬರಲಿರುವ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯೇ ಹೀಗೆ ಉದ್ಯೋಗಿಗಳನ್ನು ಕಿತ್ತುಹಾಕುತ್ತಿರು ವುದಕ್ಕೆ ಕಾರಣವಾಗಿದೆ.

ಐಟಿ ವಲಯಗಳಲ್ಲಿ ಹೆಚ್ಚಿನ ಕಂಪೆನಿಗಳು ಗುತ್ತಿಗೆ ಆಧಾರದ ಮೇಲೆಯೇ ನೇಮಕ ಮಾಡಿಕೊಳ್ಳುತ್ತವೆ. ಯಾವಾಗ ಬೇಕೆಂದರೂ ಅಂಥ ಉದ್ಯೋಗಿ ಗಳನ್ನು ಮನೆಗೆ ಕಳಿಸಬಹುದು. ಹಾಗಾಗಿ ಉದ್ಯೋಗ ಇಲ್ಲವಾಗುವ ಸಂದರ್ಭದಲ್ಲಿ ಮೊದಲ ತಲೆದಂಡವಾಗುವುದು ಇವರದೇ. ಎರಡನೆಯ ವರ್ಗವೆಂದರೆ ಈವೆಂಟ್ ಪ್ಲ್ಯಾನಿಂಗ್ ವಿಭಾಗದವರು. ಆರ್ಥಿಕ ದುಸ್ಥಿತಿಯಲ್ಲಿ ಈವೆಂಟ್‌ಗಳ ಮಾತಂತೂ ದೂರ. ಹಾಗಾಗಿ ಅವರ ಕೆಲಸಕ್ಕೂ ಕತ್ತರಿ ಬೀಳುತ್ತದೆ. ಕೆಲಸ ಇಲ್ಲವಾಗುವ ಮೂರನೆಯ ವರ್ಗವೆಂದರೆ ಕಂಪೆನಿಗಳ ಹೊಸ ಪ್ರಾಜೆಕ್ಟುಗಳ ಭಾಗವಾಗಿರುವವರು.

 ಭಾರತದಲ್ಲೂ ಸಹಜವಾಗಿಯೇ ಐಟಿ ಕ್ಷೇತ್ರ ಇದೇ ಒತ್ತಡ ಎದುರಿಸುತ್ತಿದೆ. ಇಲ್ಲೂ ದೊಡ್ಡ ಸಂಖ್ಯೆಯಲ್ಲಿ ಐಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗದಲ್ಲಿರುವವರನ್ನೂ ಅನಿಶ್ಚಿತತೆ ಕಾಡುತ್ತಿದೆ. ದುಡ್ಡು ಹರಿಯುವಾಗ ಶೋಕಿ ರೀತಿಯಲ್ಲಿ ಕೆಲಸ ಕೊಡುವ ಐಟಿ ವಲಯ, ಯಾವುದೇ ಕ್ಷಣದಲ್ಲೂ ಹೊರಗೆ ತಳ್ಳಿಬಿಡಬಹುದು ಎಂಬುದೊಂದೇ ಸತ್ಯ.

Similar News

ಜಗದಗಲ
ಜಗ ದಗಲ