ಮೋದಿ ರಾಜ್ಯದಲ್ಲೇ ಬೀಡು ಬಿಟ್ಟರೂ BJP ಗೆಲ್ಲಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಬಸವಕಲ್ಯಾಣದಲ್ಲಿ ‘ಪ್ರಜಾ ಧ್ವನಿ ಯಾತ್ರೆ'
ಬೀದರ್, ಫೆ. 3: ‘ಪ್ರಧಾನಿ ಮೋದಿಯವರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುವುದು ಮಾತ್ರವಲ್ಲ, ಅವರು ರಾಜ್ಯದಲ್ಲೇ ಬೀಡುಬಿಟ್ಟರೂ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ’ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ಗುಡುಗಿದ್ದಾರೆ.
ಶುಕ್ರವಾರ ಜಿಲ್ಲೆಯ ಬಸವಕಲ್ಯಾಣದಲ್ಲಿ ‘ಪ್ರಜಾ ಧ್ವನಿ ಯಾತ್ರೆ’ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ವಿಧಾನಸೌಧದ ಯಾವುದೇ ಗೋಡೆಗೆ ಕಿವಿಗೊಟ್ಟರೂ ಲಂಚ.. ಲಂಚ.. ಎಂಬ ಧ್ವನಿ ಕೇಳಿಸುತ್ತದೆ. ಶೇ.40ರಷ್ಟು ಕಮಿಷನ್ ನೀಡಲಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ’ ಎಂದರು.
‘ಖುದ್ದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ಮೋದಿಗೆ ಪತ್ರ ಬರೆದು ಅಳಲು ತೋಡಿಕೊಡಿದ್ದಾರೆ. ಆದರೂ, ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಬಿಜೆಪಿಯ ಆಡಳಿತದ ವಿರುದ್ಧ ಜನ ಬೇಸತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರಕಾರವನ್ನು ಕಿತ್ತೊಗೆಯುವುದು ಖಚಿತ. ಪ್ರಧಾನಿ ಮೋದಿ ಪ್ರತಿ ದಿನ ಇಲ್ಲೇ ನೆಲೆ ನಿಂತರೂ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಿ ಹಿಡಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶರಣರ ತತ್ವವೇ ನನ್ನ ಆದರ್ಶ: ‘ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಆಶೀರ್ವಾದ ಪಡೆದು ‘ಪ್ರಜಾಧ್ವನಿ ಯಾತ್ರೆ’ಯನ್ನು ಆರಂಭಿಸಿದೆ. ಬಸವಾದಿ ಶರಣರ ‘ನುಡಿದಂತೆ ನಡೆಯಬೇಕು' ಎಂಬ ತತ್ವವೇ ನನ್ನ ಆದರ್ಶ. ಇದಕ್ಕೆ ನನ್ನ ಐದು ವರ್ಷಗಳ ಆಡಳಿತ ಸಾಕ್ಷಿ’
-ಸಿದ್ದರಾಮಯ್ಯ ವಿಪಕ್ಷ ನಾಯಕ