ಕನ್ನಡ ಭಾಷೆ, ಶಾಲೆ ಉಳಿವಿಗೆ ದೊಡ್ಡ ಮಟ್ಟದ ಚಳವಳಿ ಅಗತ್ಯ: ಯಕ್ಷಗಾನ ಗೋಷ್ಠಿಯಲ್ಲಿ ಡಾ.ಪ್ರಭಾಕರ ಜೋಶಿ ಹೇಳಿಕೆ

ಸರಕಾರದಿಂದ ಕನ್ನಡ ಕಡೆಗಣನೆಗೆ ಜೋಶಿ, ದಾಮ್ಲೆ ಆಕ್ರೋಶ

Update: 2023-02-12 14:56 GMT

ಉಡುಪಿ: ಕನ್ನಡ ಉಳಿಯದಿದ್ದರೆ, ಯಕ್ಷಗಾನ ಇರುವುದಿಲ್ಲ. ಕನ್ನಡ ಶಾಲೆಗಳ ಬಗ್ಗೆ ಸರಕಾರದ ಧೋರಣೆ ಹೀಗೆ ಮುಂದುವರಿದರೆ ಕನ್ನಡ ಭಾಷೆಯೂ ಇರುವುದಿಲ್ಲ. ಹೀಗಾಗಿ ದೊಡ್ಡ ಪ್ರಮಾಣದ ಚಳವಳಿ ಇಲ್ಲದೇ ಕನ್ನಡ ಭಾಷೆ ಮತ್ತು ಶಾಲೆಗಳು ಉಳಿಯಲು ಸಾಧ್ಯವಿಲ್ಲ ಎಂದು ಪ್ರಥಮ ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನದ ಎರಡನೇ ದಿನವಾದ ರವಿವಾರ ಬೆಳಗ್ಗೆ ನಡೆದ ‘ಯಕ್ಷಗಾನ ಮತ್ತು ಭಾರತೀಯ ಚಿಂತನೆಗಳು’ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಸುಳ್ಯದ ಡಾ.ಚಂದ್ರಶೇಖರ ದಾಮ್ಲೆ ಅವರು ಕನ್ನಡ ಶಾಲೆಗಳ ಕುರಿತಂತೆ ಸರಕಾರದ ಧೋರಣೆಗೆ ವ್ಯಕ್ತಪಡಿಸಿದ ಆಕ್ಷೇಪಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಸರಕಾರದ ನೆರವನ್ನು ಅಪೇಕ್ಷಿಸುವ ಶಿಥಿಲ ಕಟ್ಟಡದಲ್ಲಿರುವ ಸರಕಾರಿ ಕನ್ನಡ ಶಾಲೆಗಳನ್ನು ಕಡೆಗಣಿಸಿ, ಅದೇ ಊರಿನಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಎರಡು ಕೋಟಿ ರೂ. ಬಿಡುಗಡೆ ಮಾಡುವ ಸರಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸೋಣ. ನಾವು ಈ ವೇದಿಕೆಯಲ್ಲಾದರೂ ಅದನ್ನು ಖಂಡಿಸೋಣ. ಬೇಕಿದ್ದರೆ ಸರಕಾರವನ್ನು ಎದುರು ಹಾಕಿಕೊಳ್ಳೊಣ ಎಂದರು.

ಎಲ್ಲಾ ಪಕ್ಷದ ರಾಜಕಾರಣಿಗಳು ವೇದಿಕೆಯಲ್ಲಿ ಕನ್ನಡದ ಮಾತನಾಡುತ್ತಾರೆ. ಆದರೆ ಕನ್ನಡ ಶಾಲೆ ಉಳಿಸಲು ಪ್ರಯತ್ನ ಇಲ್ಲವೇ ಇಲ್ಲ. ನಮ್ಮ ಕನ್ನಡ ಶಾಲೆಯ ಅಂಗಳದಿಂದ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ರಣಹದ್ದಿನಂತೆ ಎತ್ತಿಕೊಂಡು ಹೋಗುತ್ತಾರೆ. ನೋಡುವಾಗ ಬೇಸರವಾಗುತ್ತದೆ ಎಂದು ಡಾ.ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಉಳಿದರೆ ಮಾತ್ರ ಯಕ್ಷಗಾನ. ಕನ್ನಡವೇ ಇಲ್ಲದಿದ್ದರೆ ಎಲ್ಲಿಯ ಯಕ್ಷಗಾನ. ಇಂಥ ಸ್ಥಿತಿಯಲ್ಲಿ ಸಮ್ಮೇಳನ, ಈ ಮಾತು ಎಲ್ಲಾ ವ್ಯರ್ಥ. ಇಂಗ್ಲೀಷ್ ಮಾಧ್ಯಮ ಶಾಲೆಗಳು ವೈರಲ್ ಆಗಿ ವ್ಯಾಪಿಸುತ್ತಿವೆ. ಇಂಗ್ಲೀಷ್ ಮೀಡಿಯಂ ಶಾಲೆ, ಸರಕಾರ, ಪೋಷಕರು ಹಾಗೂ ಶಿಕ್ಷಕರಲ್ಲಿ ಶಿಕ್ಷಣದ ಬಗ್ಗೆ ಮಾತನಾಡಿಯೇ ಪ್ರಯೋಜನವಿಲ್ಲ. ಅವರಿಗೆ ಅರ್ಥವೂ ಆಗುವುದಿಲ್ಲ. ಆದುದರಿಂದ ದೊಡ್ಡ ಪ್ರಮಾಣದ ಚಳವಳಿ ಇಲ್ಲದೇ ಕನ್ನಡ ಶಾಲೆ ಉಳಿಸಲು ಸಾಧ್ಯವಿಲ್ಲ ಎಂದರು.

ಕನ್ನಡ ಉಳಿಯುವುದು ಯಕ್ಷಗಾನಕ್ಕೆ ಅಗತ್ಯವಾದುದರಿಂದ ಸಮ್ಮೇಳನಾಧ್ಯಕ್ಷ ನಾಗಿ ನಾನು ಕನ್ನಡ ಉಳಿಯಬೇಕೆಂದು ಪ್ರಬಲವಾಗಿ ಪ್ರತಿಪಾದಿಸುತ್ತೇನೆ.  ಕನ್ನಡ ಉಳಿಸದೇ, ಯಕ್ಷಗಾನದ ಫಾರ್ಮ್ ಉಳಿಸುವುದೆಂದರೆ ವೇಷಮಾತ್ರವಲ್ಲ. ತೆಂಕುತಿಟ್ಟಿನಲ್ಲಿ ಇಡೀ ವೇಷಭೂಷಣ ಕರಪ್ಟ್ ಆಗಿದೆ. ಹತ್ತು ಮೇಳದ ವೇಷಭೂಷಣ ರಾಶಿ ಹಾಕಿದರೆ, ಪಾರಂಪರಿಕ ವೇಷಭೂಷಣ ಒಂದೂ ಸಿಗಲಿಕ್ಕಿಲ್ಲ ಎಂದರು.

ಸರಕಾರದಿಂದ ಕನ್ನಡ ಅವಗಣನೆ: ಇದಕ್ಕೆ ಮುನ್ನ ‘ಯಕ್ಷಗಾನ ಕಂಡ ಮಾತೃತ್ವ’ ಎಂಬ ವಿಷಯದ ಕುರಿತು  ಪ್ರಬಂಧ ಮಂಡಿಸಿದ ಸುಳ್ಯದ ಶಿಕ್ಷಣ ತಜ್ಞ ಹಾಗೂ ಯಕ್ಷಗಾನ ವಿದ್ವಾಂಸ ಡಾ.ಚಂದ್ರಶೇಖರ ದಾಮ್ಲೆ ಅವರು, ಯಕ್ಷಗಾನದಲ್ಲಿ ಕಂಡುಬರುವ ಮಾತೃತ್ವವನ್ನು ವಿವರಿಸುತ್ತಾ ಕೊನೆಯಲ್ಲಿ ‘ನನ್ನ ದೃಷ್ಟಿಯಲ್ಲಿ ಭಾಷೆ ಸಹ ತಾಯಿ. ಆದರೆ ರಾಜ್ಯದ ಎಲ್ಲಾ ಪಕ್ಷಗಳ ಸರಕಾರಗಳು ಕನ್ನಡವನ್ನು ಕಡೆಗಣಿಸಿವೆ.’ ಎಂದರು.

ಸರಕಾರ ಗುಟ್ಟಿನಲ್ಲಿ, ಯಾವುದೇ ಪ್ರಚಾರ ನೀಡದೇ ಕನ್ನಡ ಶಾಲೆಯನ್ನು ಅವಗಣನೆ ಮಾಡಿ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಹಣಕಾಸಿನ ನೆರವು ನೀಡುತ್ತಿವೆ. ಇದಕ್ಕೆ ಸಂಸ್ಕೃತಿ, ಭಾಷೆ ಎಂದು ವೇದಿಕೆಯಲ್ಲಿ ಮಾತನಾಡುವ ಈಗಿನ ಆಡಳಿತ ಪಕ್ಷದ ಸರಕಾರವೂ ಹೊರತಲ್ಲ ಎಂದರು.

ಇತ್ತೀಚೆಗೆ ರಾಜ್ಯ ಸರಕಾರ ಸುಳ್ಯದಲ್ಲೇ, ಶಿಥಿಲಗೊಂಡ ನಾಲ್ಕು ಕೋಣೆಗಳಿರುವ ಕನ್ನಡ ಮಾಧ್ಯಮ ಶಾಲೆಯನ್ನು ಕಡೆಗಣಿಸಿ, ಆಂಗ್ಲ ಮಾಧ್ಯಮದ ಕೆಪಿಎಸ್ ಶಾಲೆಗೆ ಎರಡು ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ದೂರಿದ ಅವರು, ನಿಮ್ಮ ಕನ್ನಡ ಮಾತೆಯನ್ನು ಪೂಜಿಸಿ ಮತ್ತೆ ಆಡಳಿತಕ್ಕೆ ಬರುತ್ತೀರಿ. ಇಲ್ಲದಿದ್ದರೆ ಇಲ್ಲ ಎಂದರು.

ಯಕ್ಷಗಾನ ವಿದ್ವಾಂಸ ಶ್ರೀಧರ ಡಿ.ಎಸ್.ಅಧ್ಯಕ್ಷತೆ ವಹಿಸಿದ್ದ ಈ ಗೋಷ್ಠಿಯಲ್ಲಿ ಕೆರೆಮನೆ ಶಿವರಾಮ ಹೆಗಡೆ ಅವರು ‘ಯಕ್ಷಗಾನ ಮತ್ತು ಭಕ್ತಿ ಚಿಂತನೆ’ ವಿಷಯದ ಕುರಿತು ಪ್ರಬಂಧ ಮಂಡಿಸಿದರು.ಡಾ.ಯೋಗೀಶ್ ಕೈರೋಡಿ ಗೋಷ್ಠಿಯನ್ನು ನಿರ್ವಹಿಸಿದರು.

Similar News