ಉಚಿತ ಸ್ಮಾರ್ಟ್ ಫೋನ್‍ಗಳು ಎಲ್ಲಿ ಹೋದವು?: ರಾಜ್ಯ ಸರಕಾರದ ಮುಂದೆ ಪ್ರಶ್ನೆಗಳ ಸುರಿಮಳೆಗೈದ ಸುರ್ಜೇವಾಲಾ

Update: 2023-02-16 12:57 GMT

ಬೆಂಗಳೂರು, ಫೆ. 16: ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಅಸಮರ್ಥರ ಸರ್ಕಸ್ ಮತ್ತು ಭ್ರಷ್ಟಾಚಾರದ ಹೆಗ್ಗುರುತಾಗಿದ್ದು, ಬಿಜೆಪಿಯನ್ನು ಮೂರು ಪದಗಳಲ್ಲಿ ಹೇಳುವುದಾದರೆ, ಸುಳ್ಳು ಭರವಸೆ, ದುರಾಡಳಿತ, ಒಡೆದು ಆಳುವ ನೀತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ.

ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಡಿಎನ್‍ಎ ವಂಚನೆ, ಮೋಸ, ವಿಭಜನೆಗಳಿಂದ ಕೂಡಿದೆ. ಪಕ್ಷಾಂತರ ಹಾಗೂ ಭ್ರಷ್ಟಾಚಾರದಿಂದ ರಚನೆಯಾದ ಬಿಜೆಪಿಯ ಅನೈತಿಕ ಸರಕಾರವು ರಾಜ್ಯದ ಅಭಿವೃದ್ಧಿಗೆ ಶಾಪವಾಗಿದೆ ಎಂದು ಆರೋಪಿಸಿದರು.

ಮುರಿದ ಭರವಸೆಗಳು, ಹೀನಾಯ ಆಡಳಿತ, ವಿಭಜಕ ಅಜೆಂಡಾ ಎಂಬ ಮೂರು ಪದಗಳಲ್ಲಿ ರಾಜ್ಯ ಬಿಜೆಪಿ ಸರಕಾರವನ್ನು ವರ್ಣಿಸಬಹುದಾಗಿದೆ. ಈ ಸರಕಾರ ಸುಳ್ಳು ಭರವಸೆ ಮೂಲಕ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದೆ. ಭ್ರಷ್ಟಾಚಾರದ ಕೂಪವಾಗಿರುವ ಸರಕಾರದಲ್ಲಿ ಬೊಮ್ಮಾಯಿ ಅವರು ಪೇಸಿಎಂ ಹಾಗೂ ಅವರ ಆಡಳಿತ ಶೆ.40ರಷ್ಟು ಕಮಿಷನ್ ಎಂಬ ಖ್ಯಾತಿ ಪಡೆದಿದೆ ಎಂದರು.

ಬಿಜೆಪಿ ಸರಕಾರಕ್ಕೆ ಸುರ್ಜೇವಾಲಾ ಹಾಕಿದ ಪ್ರಶ್ನೆಗಳು:

ಬೊಮ್ಮಾಯಿ ಸರಕಾರ ತನ್ನ ಕೊನೆಯ ಬಜೆಟ್ ಮಂಡನೆ ಮಾಡುತ್ತಿದ್ದು, ಬಿಜೆಪಿಯ 2018ರ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ.91ರಷ್ಟು ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವುದೇಕೆ, ರೈತರಿಗೆ ಕೊಟ್ಟ 112 ಭರವಸೆಗಳ ಪೈಕಿ 97 ಭರವಸೆಗಳನ್ನು ಈಡೇರಿಸಲು ವಿಫಲವಾಗಿದ್ದು ಯಾಕೆ, ರೈತರ ಸಾಲಮನ್ನಾ ಮಾಡುವ ಭರವಸೆ ಏನಾಯಿತು. ಇನ್ನು ರೈತರಿಗೆ ನ್ಯಾಯಯುತ ಬೆಂಬಲ ಬೆಲೆ ನೀಡುವ ಭರವಸೆ ಏನಾಯಿತು. ಸರಕಾರ ಮಹಿಳೆಯರಿಗೆ ನೀಡಿದ್ದ 26 ಭರವಸೆಗಳ ಪೈಕಿ 24 ಭರವಸೆ ಈಡೇರಿಸಲು ವಿಫಲವಾಗಿದ್ದು, 10 ಸಾವಿರ ಕೋಟಿಯ ಸ್ತ್ರೀ ಉನ್ನತಿ ನಿಧಿ ಯೋಜನೆ ಏನಾಯಿತು. ರಾಜ್ಯದ ಹೆಣ್ಣು ಮಕ್ಕಳಿಗೆ ನೀಡುತ್ತೇವೆ ಎಂದಿದ್ದ ಉಚಿತ ಸ್ಮಾರ್ಟ್ ಫೋನ್‍ಗಳು ಎಲ್ಲಿ ಹೋದವು. ರಾಜ್ಯದ ಯುವಕರಿಗೆ ಕೊಟ್ಟ 18 ಭರವಸೆಗಳಲ್ಲಿ 17 ಭರವಸೆ ಈಡೇರಿಸಲು ಸರಕಾರ ವಿಫಲವಾಗಿದ್ದೇಕೆ, ಸರಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಯಾಗಿಲ್ಲ. ನೇಮಕಾತಿ ಅಕ್ರಮಗಳ ಪರಿಣಾಮ 2.52 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇದ್ದು, ಇದು ಯುವಕರ ಭವಿಷ್ಯಕ್ಕೆ ಗ್ರಹಣ ಹಿಡಿಯುವಂತೆ ಮಾಡಿದೆ ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಸರಕಾರ ತನ್ನ ಪ್ರಣಾಳಿಕೆಯಲ್ಲಿ ಎಸ್‍ಸಿ, ಎಸ್‍ಟಿ ಹಾಗೂ ಓಬಿಸಿ ಸಮುದಾಯಗಳಿಗೆ ನೀಡಿದ್ದ 81 ಭರವಸೆಗಳಲ್ಲಿ 77 ಭರವಸೆಗಳನ್ನು ಈಡೇರಿಸದೇ ದ್ರೋಹ ಬಗೆದಿರುವುದೇಕೆ, ಮಕ್ಕಳಿಗೆ ವಿದ್ಯಾರ್ಥಿ ವೇತನವಿಲ್ಲ. ಸಮುದಾಯಗಳಿಗೆ ಘೋಷಿಸಿದ್ದ 15ಸಾವಿರ ಕೋಟಿ ರೂ.ವೆಚ್ಚದ ವಸತಿ ನಿರ್ಮಾಣ ಭರವಸೆ ಪೂರ್ಣಗೊಂಡಿಲ್ಲ. 2018ರ ಬಿಜೆಪಿ ಪ್ರಣಾಳಿಕೆಯಲ್ಲಿ ಶಿಕ್ಷಣ ಕೇತ್ರಕ್ಕೆ ಘೋಷಿಸಲಾದ 32 ಭರವಸೆಗಳ ಪೈಕಿ 29 ಈಡೇರಿಸಿಲ್ಲ. ಆರೋಗ್ಯ ಕ್ಷೇತ್ರಕ್ಕೆ ನೀಡಿದ್ದ 40 ಭರವಸೆಗಳ ಪೈಕಿ 35 ಭರವಸೆ ಈಡೇರಿಲ್ಲ. ಮೂಲ ಸೌಕರ್ಯ ಕ್ಷೇತ್ರದಲ್ಲಿ 48 ಭರವಸೆಗಳ ಪೈಕಿ 40 ಭರವಸೆ ಪೂರ್ಣಗೊಂಡಿಲ್ಲ. ಕೈಗಾರಿಕಾಭಿವೃದ್ಧಿಗೆ 23 ಭರವಸೆಗಳನ್ನು ನೀಡಿ 22 ಭರವಸೆ ಈಡೇರಿಸಿಲ್ಲ. ಈ ಭರವಸೆಗಳ ವಿಚಾರಗಳಲ್ಲಿ ಸರಕಾರ ವಿಫಲವಾಗಿದ್ದು ಏಕೆ ಎಂದು ಪ್ರಶ್ನಿಸಿದರು.

ಇನ್ನು 438 ನಮ್ಮ ಕ್ಲಿನಿಕ್‍ಗಳು ಕೇವಲ ಕಾಗದದ ಮೇಲೆ ಉಳಿದಿವೆ. ಬೊಮ್ಮಾಯಿ ಮತ್ತು ಮೋದಿ ಸರಕಾರ ಎಸ್‍ಸಿ, ಎಸ್‍ಟಿ ಮೀಸಲಾತಿ ಕಾಯಿದೆಯನ್ನು ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸುವ ಪ್ರಕ್ರಿಯೆಗೆ ಮುಂದಾಗಿಲ್ಲ. ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಯನ್ನು ತರಾತುರಿಯಲ್ಲಿ ಘೋಷಿಸಿ ಆ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ಮಾಡಿದೆ. ಎಸ್‍ಸಿ, ಕುರುಬ ಹಾಗೂ ಇತರೆ ಹಿಂದುಳಿದ ಸಮುದಾಯಗಳಿಗೆ ಕೊಟ್ಟ ಭರವಸೆ ಈಡೇರಿಸದೇ ಮುಖ್ಯಮಂತ್ರಿ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಶ್ವತ್ಥ ನಾರಾಯಣ್ ಹೇಳಿಕೆಗೆ ಖಂಡನೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಟಿಪ್ಪು ಕೊಂದವರು ಉರಿಗೌಡ ನಂಜೇಗೌಡ ಅನ್ನುತ್ತಿದ್ದಾರೆ. ಇದು ಯಾವ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅಶ್ವತ್ಥ ನಾರಾಯಣ ಮತ್ತು ಸಿ.ಟಿ.ರವಿ ವಾಟ್ಸ್‍ಆ್ಯಪ್ ಯೂನಿವರ್ಸಿಟಿಯಲ್ಲಿ ಓದಿಕೊಂಡು ಬಂದಿದ್ದು, ಕೇಶವ ಕೃಪಾದಲ್ಲಿ ಹೇಗೆ ಹೇಳುತ್ತಾರೋ ಹಾಗೆಯೇ ಮಾತನಾಡುತ್ತಿದ್ದಾರೆ. ಅಶ್ವತ್ಥ ನಾರಾಯಣ್ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಲಿದ್ದು, ಕಲಾಪದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದರು.

Similar News