ಮೂಡುಬಿದಿರೆಯ ಶಾಸಕ ಈಗ ಎಷ್ಟು ಕೋಟಿ ಒಡೆಯ: ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಶ್ನೆ

Update: 2023-03-01 09:22 GMT

ಮೂಡುಬಿದಿರೆ:  ಕಾಮಗಾರಿಗಳನ್ನು ತನ್ನ ಸಂಬಂಧಿಕರಿಗೆ ಕಾಂಟ್ರಾಕ್ಟ್ ನೀಡಿ ತಾನು ಕೋಟಿ ಸಂಪಾದಿಸುತ್ತಿದ್ದರೂ ನಾನು ಬಡವ ನಾನು ಬಡವ ಎಂದು ಹೇಳುವ ಮೂಡುಬಿದಿರೆಯ ಶಾಸಕರು ಇದೀಗ ಎಷ್ಟು ಕೋಟಿಯ ಧನಿಕ ಎಂಬುದನ್ನು ಸಾಬೀತು ಪಡಿಸಲಿ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸವಾಲು ಎಸೆದಿದ್ದಾರೆ.

 ತಾಲೂಕು ಕಚೇರಿ ಸೇರಿದಂತೆ ಇಲ್ಲಿನ ವಿವಿಧ ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಅವರ ಕಾರ್ಯವೈಖರಿಯನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ತಾಲೂಕು ಆಡಳಿತ ಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

 ಹಿಂದಿನ ಶಾಸಕರು ಶ್ರೀಮಂತರು ಎಂದು ಹೇಳುತ್ತಿದ್ದ ಶಾಸಕರು ಇದೀಗ ನಮಗಿಂತ ಹತ್ತುಪಟ್ಟು ಆಸ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ  ಬಡವ ಹೋಗಿ ಬಡುವು ಆಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತಿನ ತಿರುಗೇಟು ನೀಡಿದರು.

ತನ್ನ ಶಾಸಕತ್ವದ ಅವಧಿಯಲ್ಲಿ ರಿಕ್ಷಾ ಬಿಡುತ್ತಿದ್ದವರು ಈಗ ಕೋಟ್ಯಾಧಿಪತಿಗಳಾಗಿದ್ದಾರೆ. ಶಾಸಕರ ಸಂಬಂಧಿಕರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ ಇದರಿಂದ ಗೊತ್ತಾಗುತ್ತಿದೆ ಶಾಸಕರು ಎಷ್ಟು ಒಳ್ಳೆಯವರೆಂದು. ಐಬಿಯನ್ನು ಕೆಡವಲು ಹೊರಟಿರುವುದು ಓರ್ವ ಅನ್ನ ತಿನ್ನುವ ವ್ಯಕ್ತಿ ಮಾಡುವ ಕೆಲಸವಲ್ಲ.  ಮರಳು ದಂಧೆಕೋರರಿಗೆ ಪ್ರೋತ್ಸಾಹ ನೀಡುತ್ತಿರುವುದು ಸರಿಯಲ್ಲ. ಪುರಸಭೆಯಿಂದ ಅನುಮತಿ ಪಡೆದುಕೊಳ್ಳದೆ ಇದೀಗ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪಕ್ಷದ ಕಾರ್ಯಕರ್ತರಿಗೆ  ನಂದಿನಿ ಹಾಲಿನ ಡೈರಿಯನ್ನು ಮಾಡಿಕೊಡುತ್ತಿದ್ದಾರೆ ಹೀಗೆ ಹಲವು ಭ್ರಷ್ಟಾಚಾರದಲ್ಲಿ ಶಾಸಕರು ಶಾಮೀಲಾಗುತ್ತಿದ್ದಾರೆಂದು ಆರೋಪಿಸಿದರು.

 ಬೇರೆ ಎಲ್ಲಾ ಕಾಮಗಾರಿಗಳನ್ನು ಅತೀ ವೇಗದಲ್ಲಿ  ಮಾಡಿಕೊಡುತ್ತಿರುವ ಶಾಸಕರು ಯುಜಿಡಿ ಮತ್ತು ಮಾರ್ಕೆಟಿನ ಬಗ್ಗೆ ಕಾರ್ಯಪ್ರವೃತರಾಗಲಿ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಭ್ರಷ್ಟಾಚಾರದ ಸರಕಾರ ಬಿಜೆಪಿ. ಇಲ್ಲಿನ ಶಾಸಕರು ಮತ್ತು ಅವರ ಆಪ್ತರು ಶೇ 40 ಕಮೀಷನ್ ಗಾಗಿ ಇರುವವರು ಮತ್ತು ಸರಕಾರದ ಬೊಕ್ಕಸವನ್ನು ಲೂಟಿ ಮಾಡುವವರು ಎಂದು ಆರೋಪಿಸಿದರು.
   
ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ರೈತ ಸಂಘದ ಆಲ್ವೀನ್ ಮಿನೇಜಸ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಪುರಸಭಾ ಸದಸ್ಯ ಸುರೇಶ್ ಪ್ರಭು, ಹಿಮಾಯುತ್ತುಲ್, ಪುರಂದರ ದೇವಾಡಿಗ, ಜೊಸ್ಸಿ ಮಿನೇಜಸ್, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪಡುಮಾರ್ನಾಡು ಗ್ರಾ.ಪಂ .ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ,  ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ , ಪಂಚಾಯತ್ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

Similar News