ಕೋಳಿ ಮಾಂಸದ ಅಂಗಡಿಗೆ ಬೀಗ ಜಡಿದ ಮೂಡಿಗೆರೆ ಪ.ಪಂ: ಮಾಲಕನಿಂದ ಪ್ರತಿಭಟನೆ

Update: 2023-03-01 12:07 GMT

ಮೂಡಿಗೆರೆ, ಮಾ.1: ಪಟ್ಟಣದ ಜೆಎಂ ರಸ್ತೆಯಲ್ಲಿರುವ ಪಪಂ ಮಾಜಿ ಸದಸ್ಯ ಅಲ್ತಾಫ್ ಎಂಬವರ ಮಾಲಕತ್ವದ ಕೋಳಿ ಮಾಂಸದ ಅಂಗಡಿಯಿಂದ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರ ದೂರಿನನ್ವಯ ಪಪಂ ಅಧಿಕಾರಿಗಳು ಬುಧವಾರ ಕೋಳಿ ಅಂಗಡಿಯನ್ನು ಬಂದ್‍ಗೊಳಿಸಿದ್ದು, ಇದರಿಂದ ಬೇಸತ್ತ ಅಂಗಡಿ ಮಾಲಕ ಅಲ್ತಾಫ್ ಪಪಂ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
 
ಈ ಸಂದರ್ಭದಲ್ಲಿ ಅಲ್ತಾಪ್ ಸುದ್ದಿಗಾರರೊಂದಿಗೆ ಮಾತನಾಡಿ, ತಾನು 1994ರಿಂದ ಜೆಎಂ.ರಸ್ತೆಯಲ್ಲಿ ಕೋಳಿ ಮಾಂಸದ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದೆ. 2000ನೇ ಸಾಲಿನವರೆಗೆ ಕೋಳಿ ಮಾಂಸದಂಗಡಿಗೆ ಪರವಾನಿಗೆ ನೀಡಿದ್ದಾರೆ. ನಂತರ ಪಟ್ಟಣದೊಳಗಿರುವ ಸುಮಾರು 12ಕ್ಕೂ ಅಧಿಕ ಕೋಳಿ, ಮೀನು, ಕುರಿ ಮಾಂಸದ ಅಂಗಡಿಗಳಿಗೆ ಪರವಾನಿಗೆ ನೀಡಿಲ್ಲ. ಅವುಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆದರೆ ಎಲ್ಲಾ ಮಾಂಸದಂಗಡಿಯನ್ನು ಬಿಟ್ಟು, ಈಗ ದಿಢೀರನೇ ತನ್ನ ಅಂಗಡಿ ಮಾತ್ರ ಬಂದ್‍ಗೊಳಿಸಿ ತನ್ನ ವಿರುದ್ಧ ವಯಕ್ತಿಕವಾಗಿ ಹಗೆ ಸಾಗಿಸಲಾಗುತ್ತಿದೆ. ಪಪಂ ಎಲ್ಲಾ ಮಾಂಸದಂಗಡಿಯನ್ನು ಬಂದ್‍ಗೊಳಿಸಿ ಒಂದೇ ಕಡೆ ಎಲ್ಲಾ ಅಂಗಡಿಗಳಿಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲಿಯವರೆಗೆ ತನ್ನ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. 

'ಜೆಎಂ ರಸ್ತೆಯಲ್ಲಿರುವ ಕೋಳಿ ಮಾಂಸದ ಅಂಗಡಿಯಿಂದ ಮಸೀದಿ, ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಜನರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ದೂರು ಬಂದಿದೆ. 15 ದಿನದ ಹಿಂದೆಯೇ ಕೋಳಿ ಮಾಂಸದಂಗಡಿ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ ತೆರವುಗೊಳಿಸಿರಲಿಲ್ಲ. ಹಾಗಾಗಿ ಇಂದು ಬಂದ್‍ಗೊಳಿಸಿದ್ದಾರೆ. ಪಟ್ಟಣದೊಳಗಿರುವ ಎಲ್ಲಾ ಮಾಂಸದ ಅಂಗಡಿಗಳಿಂದಲೂ ಜನರಿಗೆ ತೊಂದರೆ ಉಂಟಾಗುತ್ತಿದೆ. ಇನ್ನು 15 ದಿನದಲ್ಲಿ ಎಲ್ಲಾ ಮಾಂಸದಂಗಡಿ ತೆರವುಗೊಳಿಸಲಾಗುವುದು. ವ್ಯಾಪಾರಿಗಳಿಗೆ ಮಾರ್ಕೆಟ್ ರಸ್ತೆಯಲ್ಲಿರುವ ಪಪಂ ಮಳಿಗೆಯಲ್ಲಿ ಮಾಂಸದಂಗಡಿ ಆರಂಭಿಸಲು ಅವಕಾಶ ನೀಡಲಾಗುವುದು. ಇನ್ನು 3 ತಿಂಗಳಲ್ಲಿ ಗಂಗನಮಕ್ಕಿ ಬಳಿ ಮಾಂಸದ ಮಾರುಕಟ್ಟೆ ನಿರ್ಮಿಸಲಾಗುವುದು'

- ಜಿ.ಬಿ.ಧರ್ಮಪಾಲ್, ಅಧ್ಯಕ್ಷರು, ಪ.ಪಂ 

Similar News