ವಿಜಯಸಂಕಲ್ಪ ಯಾತ್ರೆಯಲ್ಲಿ ಮೋದಿ, ಅಮಿತ್ ಶಾ ನಾಯಕತ್ವದಲ್ಲಿ ಮತ ಕೇಳುತ್ತೇವೆ: ಕೆ.ಎಸ್.ಈಶ್ವರಪ್ಪ

Update: 2023-03-03 06:25 GMT

ಮೈಸೂರು, ಮಾ.3: ನಾವು ವಿಜಯ ಸಂಕಲ್ಪ ಯಾತ್ರೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ ನಾಯಕತ್ವ, ಪಕ್ಷದ ಸಂಘಟನೆ, ಅಭಿವೃದ್ಧಿ ಮತ್ತು ಈ ದೇಶದ ಸಂಸ್ಕೃತಿ ಆಧಾರದ ಮೇಲೆ ಮತ ಕೇಳುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ಸಂಕಲ್ಪಯಾತ್ರೆಯಲ್ಲಿ ಅಭಿವೃದ್ಧಿ ಅಥವಾ ಧರ್ಮದ ಆಧಾರದಲ್ಲಿ ಮತ ಯಾಚಿಸುತ್ತೀರ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ನಾವು ನರೇಂದ್ರ ಮೋದಿ, ಅಮಿತ್ ಶಾ ನಾಯಕತ್ವದಲ್ಲಿ ಮತ ಕೇಳುತ್ತೇವೆ. ನಂತರ ಸಂಘಟನೆ ಹಸರಿನಲ್ಲಿ ಕೇಳುತ್ತೇವೆ ನಂತರ ಅಭಿವೃದ್ಧಿ. ಸ್ವಾತಂತ್ರ್ಯ ಬಂದ ನಂತರ ಬರೀ ರಸ್ತೆ, ಚರಂಡಿ, ಕಟ್ಟಡ ಕಟ್ಟುವುದೇ ಅಭಿವೃದ್ಧಿಯಾದರೆ ಈ ದೇಶದ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಜವಾಬ್ದಾರಿ‌  ಹಾಗಾಗಿ ಸಂಸ್ಕೃತಿ ವಿಚಾರದಲ್ಲೂ ಮತ ಕೇಳುತ್ತೇವೆ ಎಂದು ಈಶ್ವರಪ್ಪ ಹೇಳಿದರು.

ನಾನು ಅಲ್ಪಸಂಖ್ಯಾರ ಮತ ಬೇಡ ಎಂದು ಹೇಳಿಲ್ಲ, ರಾಷ್ಟ್ರೀಯವಾದಿ ಮುಸ್ಲಿಮರ ಮತ ಮಾತ್ರ ಬೇಕು, ಪಿ.ಎಫ್.ಐ., ಎಸ್.ಡಿ.ಪಿ.ಐ. ಜೊತೆ ಗುರುತಿಸಿಕೊಂಡ ಮುಸ್ಲಿಮರ ಮತ ಬೇಡ ಎಂದಷ್ಟೇ ಹೇಳಿರುವುದು ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಉತ್ತರಿಸಿದರು.

ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ದಲಿತರು, ಹಿಂದುಳಿದವರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದೇವೆ.‌ ದಲಿತರು, ಹಿಂದುಳಿದವರು ಬಿಜೆಪಿ ಪರ ಇದ್ದಾರೆ. ನಾವು ಹಿಂದುಳಿದ, ದಲಿತ ಮಠಗಳಿಗೆ ಸಾಕಷ್ಟು ಅನುದಾನವನ್ನು ನೀಡಿದ್ದೇವೆ. ಹಾಗಾಗಿ ರಾಜ್ಯದ ದಲಿತ, ಹಿಂದುಳಿದ ಮಠಾಧಿಪತಿಗಳನ್ನು ಕೇಳಿದರೆ ಬಿಜೆಪಿಯಿಂದ ಎಷ್ಟು ಒಳ್ಳೆಕೆಲಸಗಳಾಗಿವೆ ಎಂದು ಗೊತ್ತಾಗಲಿದೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡಿಸುತ್ತೇನೆ ಎಂದು 120 ಕೋಟಿ ರೂ. ಖರ್ಚು ಮಾಡಿದರು. ಆದರೆ ಆ ವರದಿಯನ್ನೇ ಬಿಡುಗಡೆ ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ನೇತೃತ್ವದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ದೃಷ್ಟಿಯಿಂದ ಕುಲಶಾಸ್ತ್ರ ಅಧ್ಯಯನ ಮಾಡಿಸುತ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದರು.

ಸಚಿವ ವಿ.ಸೋಮಣ್ಣ ವಿಜಯ ಸಂಕಲ್ಪಯಾತ್ರೆಯಿಂದ ದೂರ ಉಳಿದಿರುವ ಪ್ರಶ್ನೆಗ ಉತ್ತರಿಸಿದ  ಈಶ್ವರಪ್ಪ, ಪಕ್ಷ ಯಾವ ಜವಾಬ್ದಾರಿ ಕೊಟ್ಟಿದೆ ಅದನ್ನು ನಿರ್ವಹಿಸಲಿದ್ದೇವೆ ಎಂದಷ್ಟೇ ಹೇಳಿ ವಿ.ಸೋಮಣ್ಣ ಅವರ ಬಗ್ಗೆ ಹೆಚ್ಚು ಮಾತನಾಡದೆ ನಿರಾಕರಿಸಿದರು.

ಮಾಡಾಳು ವಿರೂಪಾಕ್ಷಪ್ಪ ಮಗನ ಮೇಲೆ ಲೋಕಾಯುಕ್ತ ದಾಳಿಯಾಗಿ ಬಿಜೆಪಿ 40% ಭ್ರಷ್ಟಾಚಾರ ಸಾಬೀತಾಗಿದೆ ಹಾಗಾಗಿ ಸಿಎಂ ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್ ಆರೋಪಕ್ಕೆ ಕೆಂಡಮಂಡಲರಾದ ಈಶ್ವರಪ್ಪ, ತಿಹಾರ್ ಜೈಲಿನಿಂದ ಬಂದವರ ನಮಗೆ ಪಾಠ ಹೇಳಬೇಕಿಲ್ಲ,  ಇದೇ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಕಂತೆಗಟ್ಟಲೆ ಹಣ ಸಿಗಲಿಲ್ವೆ. ಇವರು ಭ್ರಷ್ಟಾಚಾರದ ತೊಡಗಿರುವುದು ರಾಜ್ಯದ ಜನತೆಗ ಗೊತ್ತು, ಯಾರೆ ತಪ್ಪು ಮಾಡಿದರೂ ಕ್ರಮ ಆಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಕಾಪು ಸಿದ್ಧಲಿಂಗಸ್ವಾಮಿ, ವಸಂತಕುಮಾರ್ ಉಪಸ್ಥಿತರಿದ್ದರು.

Similar News