​ಜೀವಮಾನದಲ್ಲೇ ಅತ್ಯಂತ ಎತ್ತರದ ಕಟ್ಟಡ ಏರಿದ ಜ್ಯೋತಿರಾಜ್ !

ಮಣಿಪಾಲದ 35 ಅಂತಸ್ತಿನ ವಸತಿ ಸಮುಚ್ಚಯ ಹತ್ತಿದ ಸಾಹಸಿ

Update: 2023-03-05 14:57 GMT

ಉಡುಪಿ, ಮಾ.5: ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ರವಿವಾರ ಬರಿಗೈಯಲ್ಲಿ ಮಣಿಪಾಲದ 37 ಮಹಡಿಗಳ 120 ಮೀಟರ್ ಎತ್ತರದ ರಾಯಲ್ ಎಂಬೆಸಿ ವಸತಿ ಸಮುಚ್ಛಯವನ್ನು ಏರುವ ಮೂಲಕ ಸಾಹಸ ಮೆರೆದಿದ್ದಾರೆ. ಇದು ಕೋತಿರಾಜ್ ತನ್ನ ಜೀವಮಾನದಲ್ಲಿ ಹತ್ತಿದ ಅತೀ ಎತ್ತರದ ಕಟ್ಟಡವಾಗಿದೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾಲಕತ್ವದ ಈ ವಸತಿ ಸಮುಚ್ಛಯವನ್ನು ಬೆಳಗ್ಗೆ 11.13ಕ್ಕೆ ಏರಿದ ಕೋತಿರಾಜ್, ಸುಮಾರು ಒಂದು ಗಂಟೆ ಅವಧಿ ಯಲ್ಲಿ ಅಂದರೆ 12.08ಕ್ಕೆ 35ನೆ ಮಹಡಿಗಳ ಎತ್ತರಕ್ಕೆ ಏರುವಲ್ಲಿ ಯಶಸ್ವಿ ಯಾದರು. ಇವರು ಕಟ್ಟಡದ ತುತ್ತ ತುದಿಯಲ್ಲಿರುವ ಗೋಪುರದ ಮೇಲೇರಿ ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮಿಸಿದರು.

ಕಟ್ಟಡದ ಕೆಳಗೆ ನೆರೆದಿದ್ದ ನೂರಾರು ಸಂಖ್ಯೆಯ ಜನರು ಕೋತಿ ರಾಜ್‌ರನ್ನು ಹುರುದಂಬಿಸಿದರು. ಈ ಸಾಧನೆಯ ಬಳಿಕ ಕೋತಿರಾಜ್ ಮತ್ತು ಅವರ ತಂಡವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸನ್ಮಾನಿಸಿದರು. ಸಾರ್ವಜನಿಕರು ಕೋತಿರಾಜ್ ಅವರನ್ನು ಅಭಿನಂದಿಸಿದರು. ಸ್ಥಳದಲ್ಲಿ ಮಣಿಪಾಲ ಪೊಲೀಸರು ಭದ್ರತೆ ಒದಗಿಸಿದ್ದರು.

‘ತುಂಬಾ ಕಷ್ಟಕರವಾಗಿದ್ದರೂ ಸವಾಲಾಗಿ ತೆಗೆದುಕೊಂಡು ಕಟ್ಟಡವನ್ನು ಹತ್ತಿದ್ದೇನೆ. 30 ಮಹಡಿ ಕಟ್ಟಡ ಇದಾಗಿದ್ದು, ಗೋಪುರ ಸೇರಿ ಒಟ್ಟು 35 ಅಂತಸ್ತಿನಷ್ಟು ಎತ್ತರಕ್ಕೆ ಇದೆ. ನನ್ನ ಜೀವಮಾನದಲ್ಲಿ ಅತ್ಯಂತ ಎತ್ತರಕ್ಕೆ ಏರಿದ ಕಟ್ಟಡ ಇದಾಗಿದೆ. ಇದಕ್ಕಿಂತ ಮೊದಲು ನಾವು 25 ಅಂತಸ್ತಿನ ಕಟ್ಟಡವನ್ನು ಏರಿದ್ದೇನೆ’ ಎಂದು ಕೋತಿರಾಜ್ ತಿಳಿಸಿದರು.

‘ಅಡ್ವೆಂಚರ್ ಮಂಕಿ ಕ್ಲಬ್ ಎಂಬ ಫೌಂಡೇಶನ್ ಸ್ಥಾಪನೆಗಾಗಿ ನಿಧಿ ಸಂಗ್ರಹಿ ಸುವ ಉದ್ದೇಶದಿಂದ ತಂಡ ಜೊತೆ ಇಡೀ ರಾಜ್ಯಾದ್ಯಂತ ಸಂಚರಿಸಿ ಸಾಹಸ ಪ್ರದರ್ಶನಗಳನ್ನು ನೀಡುತ್ತಿದ್ದೇನೆ. ಕರಾವಳಿಯ ಉರಿ ಬಿಸಿಲಿನಲ್ಲೂ ಕೈ ಸುಟ್ಟು ಕೊಂಡು ಮಣಿಪಾಲದ ಕಟ್ಟಡ ಹತ್ತಿದ್ದೇನೆ. ದೇವರ ಆಶೀರ್ವಾದದಿಂದ ಯಶಸ್ವಿಯಾಗಿ ಪೂರೈಸಿದ್ದೇನೆ’ ಎಂದು ಅವರು ಹೇಳಿದರು.

‘ಮಣಿಪಾಲದ ಬಹುಮಹಡಿ ಕಟ್ಟಡವನ್ನು ಹತ್ತಿರುವುದರಿಂದ ನನ್ನ ಮುಂದಿನ ಗುರಿ ದುಬೈಯ ಬುರ್ಜ್ ಖಲಿಫ ಕಟ್ಟಡ ಹತ್ತಲು ಸುಲಭವಾಗುತ್ತದೆ. ಕೊರೋನಾ ಹಾಗೂ ನನ್ನ ದೈಹಿಕ ಸಮಸ್ಯೆಯಿಂದ ಆ ಗುರಿ ಸಾಧಿಸಲು ಸ್ವಲ್ಪ ವಿಳಂಬವಾಗಿದೆ. ಮುಂದೆ ಅದನ್ನು ಸಾಧಿಸುತ್ತೇನೆ. ಅಲ್ಲದೆ ಇಲ್ಲಿಂದ ನಾನು ಮುಂದೆ ಮಂಗಳೂರಿಗೆ ತೆರಳಿ ಅಲ್ಲಿನ ಬೃಹತ್ ಕಟ್ಟಡ ಏರಿ ಸಾಹಸ ಪ್ರದರ್ಶನ ಮಾಡಲಿದ್ದೇನೆ. ಅಲ್ಲಿನ ಜನ ಕೂಡ ನನಗೆ ಬೆಂಬಲ ಕೊಡಬೇಕು’
-ಕೋತಿರಾಜ್, ಸಾಹಸಿ

Similar News