ವೈವಿಧ್ಯವನ್ನು ಒಪ್ಪಿಕೊಂಡಾಗಲೇ ಜಾಗತಿಕ ಪ್ರಗತಿ: ಗೌರವ್ ಪಠಾನಿಯಾ

Update: 2023-03-18 06:25 GMT

ಉತ್ತರ ಅಮೆರಿಕದಲ್ಲಿನ ಭಾರತೀಯ ಮೂಲದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹತ್ವದ ನಿರ್ಧಾರವನ್ನು ಸಿಯಾಟಲ್ ಸಿಟಿ ಕೌನ್ಸಿಲ್ ಫೆಬ್ರವರಿಯಲ್ಲಿ ಕೈಗೊಂಡಿತು. ನಗರದಲ್ಲಿ ಜಾತಿ ತಾರತಮ್ಯ ನಿಷೇಧಿಸುವ ಮಹತ್ವದ ಸುಗ್ರೀವಾಜ್ಞೆಯನ್ನು ಅಂಗೀಕರಿಸಲಾಯಿತು.

ನಗರಸಭೆ ಸದಸ್ಯರಾದ ಕ್ಷಮಾ ಸಾವಂತ್ ಜನವರಿ 24ರಂದು ಸುಗ್ರೀವಾಜ್ಞೆ ಪ್ರಸ್ತಾಪ ಮಂಡಿಸಿದ್ದರು. ಉತ್ತರ ಅಮೆರಿಕದ ಪ್ರಭಾವಿ ಸೌತ್ ಏಶ್ಯನ್ ಬಾರ್ ಅಸೋಸಿಯೇಷನ್ ಕೂಡ ಸುಗ್ರೀವಾಜ್ಞೆಗೆ ಬೆಂಬಲ ಸೂಚಿಸಿತು. ಸಿಯಾಟಲ್ ಇಂಡಿಯನ್-ಅಮೆರಿಕನ್ಸ್, ಸಮಾನತೆ ಲ್ಯಾಬ್ಸ್, ಟೆಕ್ಸಾಸ್‌ನ ಅಂಬೇಡ್ಕರ್ ಬೌದ್ಧರ ಸಂಘ, ಬೋಸ್ಟನ್ ಸ್ಟಡಿ ಗ್ರೂಪ್, ಅಂಬೇಡ್ಕರ್ ಕಿಂಗ್ಸ್ ಸ್ಟಡಿ ಸರ್ಕಲ್ ಮತ್ತು ಅಂಬೇಡ್ಕರ್ ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ ಇವೆಲ್ಲವುಗಳ ಒಗ್ಗೂಡುವಿಕೆಯ ಫಲವಾಗಿ ಸುಗ್ರೀವಾಜ್ಞೆ ಜಾರಿಯಾಗಿದೆ.

ನೇಮಕಾತಿ ಮತ್ತು ಕೆಲಸದ ಸ್ಥಳಗಳಲ್ಲಿ ಜಾತಿ ತಾರತಮ್ಯ ತಡೆ ದೃಷ್ಟಿಯಿಂದ ಈ ಕಾನೂನು ಮಹತ್ವ ಪಡೆದಿದೆ. ಅಮೆರಿಕದಲ್ಲೂ ಭಾರತೀಯ ಮೂಲದ ದಲಿತರು, ಅಲ್ಲಿನ ಮೇಲ್ಜಾತಿಗಳಿಂದ ತಾರತಮ್ಯ ಎದುರಿಸುತ್ತಿರುವ ಹಲವಾರು ಪ್ರಕರಣಗಳು ವರದಿಯಾಗಿವೆ. ದಲಿತರು ತಮ್ಮ ಹೆಸರು ಹೇಳಲಾರದೆ ಬದಲಿಸಿಕೊಂಡು ಹೋಗಬೇಕಾದ ಸ್ಥಿತಿಯಿರುವ ಬಗ್ಗೆಯೂ ದೂರುಗಳಿವೆ. ಈ ನಿಟ್ಟಿನಲ್ಲಿ ಸಿಯಾಟಲ್ ಸಿಟಿ ಕೌನ್ಸಿಲ್ ಜಾರಿಗೊಳಿಸಿರುವ ಸುಗ್ರೀವಾಜ್ಞೆ ಮಹತ್ವದ್ದಾಗಿದೆ.

ಸುಮಾರು 54 ಲಕ್ಷ ದಕ್ಷಿಣ ಏಶ್ಯನ್ನರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದವರು. ಈ ಅನೇಕ ಸಮುದಾಯಗಳಲ್ಲಿ, ಜಾತಿ ಎಂದು ಕರೆಯಲ್ಪಡುವ 3,000 ವರ್ಷಗಳಷ್ಟು ಹಳೆಯದಾದ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆ ಇನ್ನೂ ಪ್ರಚಲಿತ. ಫೆಬ್ರವರಿ 21ರಂದು ಸಿಯಾಟಲ್ ತಾರತಮ್ಯ ವಿರೋಧಿ ಕಾನೂನು ಮೂಲಕ ಜಾತಿ ಆಧಾರಿತ ತಾರತಮ್ಯ ನಿಷೇಧಿಸಿದ ಮೊದಲ ಅಮೆರಿಕನ್ ನಗರವಾಯಿತು.

ಈ ಹಿನ್ನೆಲೆಯಲ್ಲಿ ಪಿಬಿಎಸ್ ನ್ಯೂಸ್‌ಅವರ್‌ನ ನಿಕೋಲ್ ಎಲ್ಲಿಸ್ ಅವರು ಈಸ್ಟರ್ನ್ ಮೆನ್ನೊನೈಟ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರಜ್ಞ ಗೌರವ್ ಪಠಾನಿಯಾ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. ಸಿಯಾಟಲ್ ತೆಗೆದುಕೊಂಡ ಕ್ರಮ ಅಮೆರಿಕದ ಉಳಿದ ಭಾಗಗಳನ್ನು ಹೇಗೆ ಪ್ರಭಾವಿಸಲಿದೆ ಎಂಬುದರ ಕುರಿತು ಗೌರವ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ:

‘‘ಜಾತಿ ಪದ್ಧತಿ 3 ಸಾವಿರ ವರ್ಷಗಳಷ್ಟು ಹಳೆಯದು. ಜಾತಿ ಎಂಬುದು ಸಾಮಾಜಿಕ ವರ್ಗ. ವಂಶಿಕವಾಗಿ ಗುರುತಿಸಲಾಗುವಂಥದ್ದು. ಸಾವಿರಾರು ಉಪಜಾತಿಗಳಿವೆ. ಬಹಳ ಸಂಕೀರ್ಣವಾದ ವ್ಯವಸ್ಥೆ ಇದು. ಸಂಪ್ರದಾಯ, ಹಲವು ಸಾಮಾಜಿಕ ಕಟ್ಟುಪಾಡುಗಳು ಆಯಾ ಜಾತಿಯ ಹಿನ್ನೆಲೆಯಲ್ಲಿ ಇವೆ. ಜಾತಿ ಪದ್ಧತಿ ಜನರನ್ನು ಮೇಲ್ವರ್ಗ ಮತ್ತು ಕೆಳವರ್ಗ ಎಂದು ವಿಭಜಿಸುತ್ತದೆ. ಕೆಳವರ್ಗದವರನ್ನು ಶೋಷಿತರು, ದಮನಿತರು ಎಂದು ಗುರುತಿಸಲಾಗುತ್ತದೆ. ಕಾನೂನಾತ್ಮಕ ಅಲ್ಲದಿದ್ದರೂ, ಅದಿನ್ನೂ ಮುಂದುವರಿದುಕೊಂಡು ಬಂದಿದೆ. ಅದೊಂದು ಜನರ ಮನಸ್ಸಿನಲ್ಲಿ ಉಳಿದುಕೊಂಡು ಬಂದಿರುವ ಭೇದದ ಪರಿಕಲ್ಪನೆ. ಅದು ಅವರ ದೈನಂದಿನ ವರ್ತನೆಯಲ್ಲಿ, ಆಯ್ಕೆಯಲ್ಲಿ ಮತ್ತು ಸಾಮಾಜಿಕ ನಡಾವಳಿಗಳಲ್ಲಿ ಕಾಣಿಸುತ್ತದೆ.’’

‘‘ಬ್ರಾಹ್ಮಣರನ್ನು ಮೇಲ್ವರ್ಗದವರು ಎಂದು ಭಾರತದಲ್ಲಿ ಕಾಣಲಾಗುತ್ತದೆ. ಬ್ರಾಹ್ಮಣನಾಗಿ ಹುಟ್ಟಿದವರು ಬ್ರಾಹ್ಮಣನಾಗಿಯೇ ಇರಬೇಕು. ಹಾಗೆಯೇ ದಲಿತರಾಗಿ ಹುಟ್ಟಿದವರು ದಲಿತರಾಗಿಯೇ ಇರಬೇಕು. ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಧರ್ಮವನ್ನು ಬದಲಿಸಿಕೊಳ್ಳಬಹುದು. ಆದರೆ ಜಾತಿಯನ್ನು ಬದಲಿಸಲು ಆಗದು.’’

‘‘ಸಂಪ್ರದಾಯಗಳು, ಆಚರಣೆಗಳು ಇವೆಲ್ಲವೂ ಇದನ್ನು ನಿರೂಪಿಸುತ್ತವೆ. ಜಾತಿ ಎಂಬುದು ಜನರ ಒಂದು ಮನಃಸ್ಥಿತಿ. ಬಹಳಷ್ಟು ಸಂದರ್ಭಗಳಲ್ಲಿ ಜನರ ಅಡ್ಡಹೆಸರಿನ ಮೇಲೆಯೇ ಅವರು ಯಾವ ಜಾತಿಯವರೆಂದು ತಿಳಿದುಕೊಳ್ಳಬಹುದಾಗಿದೆ. ಅಡ್ಡಹೆಸರಿನ ಮೂಲಕವೇ ಇವನು ಮೇಲ್ಜಾತಿಯವನು, ಇವನು ಕೆಳಜಾತಿಯವನು ಎಂದು ಪತ್ತೆ ಮಾಡಲಾಗುತ್ತದೆ. ಜಾತಿಯ ಮೇಲೆಯೇ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಯಾರು ಯಾವ ಸಾಮಾಜಿಕ ಕೂಟಗಳಲ್ಲಿ ಪಾಲ್ಗೊಳ್ಳಬೇಕು, ಪಾಲ್ಗೊಳ್ಳಬಾರದು ಎಂಬುದು ನಿರ್ಧಾರಿತವಾಗುತ್ತದೆ.’’

‘‘ಜಾತಿಯ ಆಧಾರದ ಮೇಲೆಯೇ ಯಾರೊಂದಿಗೆ ಸಂಬಂಧ, ಯಾರೊಂದಿಗೆ ಗೆಳೆತನ ಎಂಬುದೂ ನಿರ್ಧಾರವಾಗುತ್ತದೆ. ಹಾಗೆಯೇ ದಾಂಪತ್ಯ ಬದುಕು ಕೂಡ. ಮುಂದಿನ ತಲೆಮಾರಿನ ವೇಳೆಗೆ ಇದೆಲ್ಲ ಸಂಕೀರ್ಣತೆಗಳನ್ನು ದಾಟಿಕೊಳ್ಳುವುದು ಹೇಗೆ ಎಂಬುದು ದೊಡ್ಡ ಸವಾಲು.’’

‘‘ಜಾತಿಯ ಆಧಾರದ ಮೇಲೆ ತಾರತಮ್ಯ ಕೂಡದು ಎಂಬ ಇಂಥ ಕಾನೂನು ತಂದಿರುವ ಕೌನ್ಸಿಲರ್‌ಗೆ ಧನ್ಯವಾದಗಳು. ತಾರತಮ್ಯ ನಡೆಯುತ್ತಿರುವುದು ಹಲವಾರು ಪುರಾವೆಗಳನ್ನು ನೋಡಿದ ಬಳಿಕ ಗೊತ್ತಾಗಿಯೇ ಇಂಥದೊಂದು ಸುಗ್ರೀವಾಜ್ಞೆ ತರಲಾಗಿದೆ. ಹಲವಾರು ಮಂದಿ ಜಾತಿರಹಿತ, ಭಯರಹಿತ ಸನ್ನಿವೇಶದಲ್ಲಿ ಬದುಕಲು ಬಯಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಇದು ಮುಖ್ಯವಾಗಿದೆ.’’

‘‘ಇದೊಂದು ಚಳವಳಿ. ವೈಯಕ್ತಿಕ ಅಭಿವ್ಯಕ್ತಿ. ಬಹಳಷ್ಟು ದಕ್ಷಿಣ ಏಶ್ಯದ ಮಂದಿ ಅವರ ಜಾತಿ, ಮೂಲಕವೇ ಗುರುತಿಸಲ್ಪಡುತ್ತಾರೆ. ಇದು ಅಂತಿಮವಾಗಿ ಒಂದು ಸಾಮಾಜಿಕ ಸಂಕಟದ ವಿಚಾರ. ವಿಶೇಷವಾಗಿ ವಿದ್ಯಾರ್ಥಿಗಳು ಇದರ ಕಟು ಪರಿಣಾಮಗಳನ್ನು ಎದುರಿಸುತ್ತಾರೆ. ಇದರಿಂದ ಬಿಡಿಸಲೆಂದೇ ಹೊಸ ನೀತಿಗಳು ವಿವಿಗಳಲ್ಲಿ ಬರುತ್ತಿವೆ.’’

‘‘ಕೆಲವರು ಬದಲಾವಣೆ ಬಯಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಇರಬೆಕೆಂದು ಬಯಸುತ್ತಿದ್ದಾರೆ. ಅವರಿನ್ನೂ ತೀರಾ ಸಾಂಪ್ರದಾಯಿಕ ರೀತಿಯಲ್ಲಿಯೇ ಯೋಚಿಸುತ್ತಿರುವವರು. ಅಂಥವರು ಇದನ್ನು ವಿರೋಧಿಸುತ್ತಿರಬಹುದು. ಆದರೆ ಈಗಿನ ಸಂದರ್ಭದಲ್ಲಿ ಎಲ್ಲರಿಗೂ ಎಲ್ಲ ಹಕ್ಕುಗಳಿವೆ. ಪ್ರಜಾಸತ್ತಾತ್ಮಕವಾಗಿ ಪಡೆಯಬೇಕಾದ ಹಕ್ಕುಗಳು ಅವು.’’

‘‘ಇಲ್ಲಿನ ಕಂಪೆನಿಗಳೆಲ್ಲ ಜಾಗತಿಕ ಮಟ್ಟದವು. ಇಲ್ಲಿ ಅಂಥ ತಾರತಮ್ಯವಿರಕೂಡದು. ಹಾಗೆಯೇ ಇಲ್ಲಿಗೆ ಬರುವವರೂ ಈ ದೊಡ್ಡ ಸಮೂಹದ ಭಾಗವಾಗಬೇಕು. ವೃತ್ತಿಯಲ್ಲಿ ಮೇಲ್ವರ್ಗವೇ ತನ್ನದೇ ಆದ ಹಿಡಿತ ಸಾಧಿಸಿದೆ. ಈಗ ಇದು ಪ್ರಗತಿಯೆಡೆಗಿನ ಹೆಜ್ಜೆ. ಹೊಸ ಬದಲಾವಣೆಗೆ ತೆರೆದುಕೊಳ್ಳಬೇಕಿದೆ. ವಿಶಾಲ ಮನೊಭಾವದ ಆಲೋಚನೆ ಉದ್ಯೋಗಿಗಳಿಗೂ ಅವಕಾಶ ತೆರೆಯುವುದಲ್ಲದೆ, ಜಾಗತಿಕ ಮಟ್ಟದ ಈ ಕಂಪೆನಿಗಳಿಗೂ ವೈವಿಧ್ಯತೆಯ ಸದುಪಯೋಗಪಡಿಸಿಕೊಳ್ಳುವುದರಿಂದ ಲಾಭವಾಗಲಿದೆ.’’

Similar News

ಜಗದಗಲ
ಜಗ ದಗಲ