ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರು ಮೃತ್ಯು
Update: 2023-03-19 16:17 GMT
ಬೆಳಗಾವಿ, ಮಾ. 19: ಇಲ್ಲಿನ ಹುಕ್ಕೇರಿ ತಾಲೂಕಿನ ಯಾದಗುಡ ಗ್ರಾಮದ ಹೊರ ವಲಯದ ಜಮೀನಿನಲ್ಲಿರುವ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದ ಬಾಲಕರಿಬ್ಬರು ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಯಾದಗುಡ ಗ್ರಾಮದ ಪ್ರಕಾಶ ರಡ್ಡೆರಟ್ಟಿ ಅವರ ಪುತ್ರ ಯಮನಪ್ಪ (10) ಹಾಗೂ ಬಸಪ್ಪ ಅವರ ಪುತ್ರ ಯಶು (14) ಎಂದು ಗುರುತಿಸಲಾಗಿದೆ.
ರವಿವಾರ ಕ್ರಿಕೆಟ್ ಆಟಕ್ಕೆ ತೆರಳುತ್ತೇವೆಂದು ಮನೆಯಲ್ಲಿ ಹೇಳಿ ಕೃಷಿ ಹೊಂಡಕ್ಕೆ ತೆರಳಿದ್ದ ಬಾಲಕರಿಬ್ಬರು ನೀರಿಗೆ ಇಳಿದಿದ್ದು, ಒಬ್ಬರ ಹಿಂದೆ ಒಬ್ಬರು ನೀರಿಗೆ ಇಳಿದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.
ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.