ರಾಜ್ಯದ ಭವಿಷ್ಯ ರೂಪಿಸಲು ಕಾಂಗ್ರೆಸ್ ಅಧಿಕಾರಕ್ಕೆ ತರಲು ಶಪಥ ಮಾಡಿ: ಸಿದ್ದರಾಮಯ್ಯ ಕರೆ
ಬೆಳಗಾವಿ, ಮಾ. 20: ರಾಜ್ಯದಲ್ಲಿರುವ ಯುವ ಜನರ ವಿರೋಧಿ, ಭ್ರಷ್ಟ ಸರಕಾರವನ್ನು ಕಿತ್ತೊಗೆದು ಮುಂದಿನ 5 ವರ್ಷಗಳ ಕಾಲ ರಾಜ್ಯದ ಭವಿಷ್ಯವನ್ನು ರೂಪಿಸುವ ಕಾಂಗ್ರೆಸ್ ಸರಕಾರವನ್ನು ತರುತ್ತೇವೆ ಎಂದು ಇಲ್ಲಿ ಸೇರಿರುವ ಯುವಕರು ಶಪಥ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಸೋಮವಾರ ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಯುವ ಕ್ರಾಂತಿ’ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ 18 ವರ್ಷ ತುಂಬಿದ ಎಲ್ಲ ಯುವಕ, ಯುವತಿಯರಿಗೆ ಮತದಾನದ ಹಕ್ಕು ನೀಡಿದ್ದರು, ಇದರಿಂದ ದೇಶದ ಯುವ ಜನರು ರಾಜಕೀಯದಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಜಗತ್ತಿನಲ್ಲಿ ದೊಡ್ಡ ರಾಜಕೀಯ ಬದಲಾವಣೆಯನ್ನು ತರಲು ಯುವ ಜನರಿಂದ ಮಾತ್ರ ಸಾಧ್ಯ ಎಂಬುದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ ಎಂದರು.
ರಾಜೀವ್ ಗಾಂಧಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರಿಂದ ದೇಶದ ಯುವಜನರಿಗೆ ಉದ್ಯೋಗ ಸಿಗಲು ಸಾಧ್ಯವಾಯಿತು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 9 ವರ್ಷವಾಗುತ್ತಾ ಬಂದಿದೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು 4 ವರ್ಷ ತುಂಬುತ್ತಾ ಬಂದಿದೆ. ಈ ಡಬಲ್ ಇಂಜಿನ್ ಸರಕಾರಗಳು ದೇಶದ ಯುವ ಜನರಿಗೆ ಏನು ಮಾಡಿವೆ? ಎಂದು ಅವರು ಪ್ರಶ್ನಿಸಿದರು.
ಮೋದಿ ಓಟಿಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಬಂದಾಗ ಬರಲಿಲ್ಲ, ಕೊರೋನ ಬಂದಾಗ ಆಮ್ಲಜನಕ ಸಿಗದೆ ರಾಜ್ಯದಲ್ಲಿ ನೂರಾರು ಜನ ಸತ್ತಾಗ, ಚಿಕಿತ್ಸೆ ಸಿಗದೆ ಲಕ್ಷಾಂತರ ಜನ ಸತ್ತಾಗ ಮೋದಿ ಕರ್ನಾಟಕಕ್ಕೆ ಬರಲಿಲ್ಲ. ಈಗ ಚುನಾವಣೆ ಬರುತ್ತಿರುವುದರಿಂದ ಬರುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾದಿಯಾಗಿ ಇಡೀ ಸರಕಾರವೇ ಭ್ರಷ್ಟವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇಲ್ಲಿನ ಸರಕಾರಕ್ಕೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಮೋದಿ ಅವರನ್ನು ಪದೇ ಪದೇ ಕರೆದುಕೊಂಡು ಬಂದು ಚುನಾವಣೆ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ, ಆದರೆ ಮತ್ತೆ ಮತ್ತೆ ನಾಡಿನ ಜನರನ್ನು ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ತಲೆಬುಡವಿಲ್ಲದ ಆರ್ಥಿಕ ನೀತಿಗಳಿಂದಾಗಿ ಲಕ್ಷಾಂತರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚಿಹೋದವು. ಇದರಿಂದ ಇಲ್ಲಿ ಉದ್ಯೋಗಗಳು ಸಿಗುವುದು ಕಷ್ಟವಾಯಿತು, ದೇಶದ 12.89 ಲಕ್ಷ ಯುವ ಜನರು ಹೊರದೇಶದಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದಾರೆ, ಈ ರೀತಿ ಪ್ರತಿಭಾ ಪಲಾಯನಕ್ಕೆ ನಿಮ್ಮ ಬಳಿ ಉತ್ತರವಿದೆಯಾ ಮೋದಿಜೀ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮೋದಿ ರಾಜ್ಯಕ್ಕೆ ಬಂದಾಗ ನಿರುದ್ಯೋಗ, ಭ್ರಷ್ಟಾಚಾರ, ರೈತರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ, ಕೇವಲ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಜನರ ದಾರಿ ತಪ್ಪಿಸುವುದು ಹಾಗೂ ಹಣದ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದೀರಾ. ಇದರಿಂದ ನಿಮಗೆ ಯಾವ ಪ್ರಯೋಜನವೂ ಆಗಲ್ಲ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸುವ ಪಣ ತೊಟ್ಟು, ನಾವು ಇದೇ ಭೂಮಿಯಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೆವು. ಇಂದು ಇದೇ ಭೂಮಿಯಲ್ಲಿ ಈ ಯುವಕ್ರಾಂತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು, ಉದ್ಯೋಗ ನೀಡಬೇಕು. ಯುವಕರು ಉದ್ಯೋಗ ಪಡೆಯುವುದಷ್ಟೇ ಅಲ್ಲ, ಅವರೇ ಉದ್ಯೋಗ ಸೃಷ್ಟಿಸುವಂತೆ ಮಾಡಬೇಕು. ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿ ನೀಡಲು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಖಾಸಗಿ ಉದ್ಯೋಗ ವಿನಿಮಯ ಕಾರ್ಯಕ್ರಮ, ಸರಕಾರಿ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು. ಈ ನೇಮಕಾತಿಗಳನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಲಿದೆ. ರಾಜ್ಯದಲ್ಲಿ ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು. ಈ ಬಾರಿ ನಾವು ಒಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ 140 ಕ್ಷೇತ್ರದಲ್ಲಿ ಗೆದ್ದು ಆಡಳಿತ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತು ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಜೊತೆ ಕೈ ಜೋಡಿಸಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಸಮಾವೇಶದಲ್ಲಿ ಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಮುಖಂಡರಾದ ಕೆ.ಎಚ್.ಮುನಿಯಪ್ಪ, ಆರ್.ವಿ.ದೇಶಪಾಂಡೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯಾಧ್ಯಕ್ಷ ಮುಹಮ್ಮದ್ ನಲಪಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.