ಜನರ ತೆರಿಗೆ ಹಣದಿಂದ ಜಾಹೀರಾತುಗಳ ಮೂಲಕ ಸುಳ್ಳುಗಳ ಮಾರಾಟ: ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಮಾ.23: ದೇಶದ ಎಲ್ಲೆಡೆ ನಿರುದ್ಯೋಗ ಸಮಸ್ಯೆ ಇದೆ. ಆದರೂ, ಜನರ ತೆರಿಗೆ ಹಣವನ್ನು ಬಳಸಿ ಜಾಹೀರಾತುಗಳ ಮೂಲಕ ಸುಳ್ಳುಗಳನ್ನು ಮಾರಾಟ ಮಾಡುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳಿಗೆ ಒಂದು ಗುಲಗಂಜಿಯಷ್ಟಾದರೂ ನಾಚಿಕೆ ಇದೆಯೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಗಳಿಗೆ ಒಂದು ಗುಲಗಂಜಿಯಷ್ಟಾದರೂ ನಾಚಿಕೆ ಇದೆಯೆ ಎಂದು ನನಗೆ ಅನುಮಾನವಾಗಿದೆ. ಜನರ ತೆರಿಗೆ ಹಣವನ್ನು ಬಳಸಿ ಜಾಹಿರಾತುಗಳ ಮೂಲಕ ಸುಳ್ಳುಗಳನ್ನು ಮಾರಾಟ ಮಾಡುವ ಹೀನಾತಿಹೀನ ರಾಜಕೀಯವನ್ನು ಬಿಜೆಪಿ ಸರಕಾರಗಳು ಮಾಡುತ್ತಿವೆ. ಕೋಟಿಗಟ್ಟಲೆ ವೆಚ್ಚದ ಜಾಹಿರಾತುಗಳನ್ನು ಪ್ರತಿನಿತ್ಯ ಬಿಡುಗಡೆ ಮಾಡಲಾಗುತ್ತಿದೆ. ನಾನು ಜಾಹಿರಾತುಗಳನ್ನು ಕೊಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಸತ್ಯಸಂಗತಿಗಳನ್ನು ಮಾತ್ರ ಜನರಿಗೆ ಹೇಳಿ ಎಂದು ಒತ್ತಾಯಿಸಿದರು.
ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಕೂಡ ಒಂದು. ಈ ಸಂಸ್ಥೆಯು ಬಿಡುಗಡೆ ಮಾಡಿರುವ ದಾಖಲೆಗಳನ್ನು ನೋಡಿದರೆ ರಾಜ್ಯದ ನಿರುದ್ಯೋಗದ ಪ್ರಮಾಣ ಭಯ ಹುಟ್ಟಿಸುತ್ತದೆ.ಆದರೂ, ಮಾ.22 ರಂದು ಯುಗಾದಿಯ ದಿನ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ 68.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಉಲ್ಲೇಖಿಸಿದೆ. ಒಂದು ವೇಳೆ ಇದು ನಿಜವಾಗಿದ್ದರೆ, ವಾಸ್ತವದಲ್ಲಿ ನಿರುದ್ಯೋಗ ಕಡಿಮೆಯಾಗಬೇಕಿತ್ತಲ್ಲ? ಆಗಿದೆಯಾ ಎಂದು ಅವರು ಕೇಳಿದರು.
ಅದು ಅಲ್ಲದೆ, ಸಿಎಂಐಇ ಸಂಸ್ಥೆ ಪ್ರತಿ ದಿನದ ನಿರುದ್ಯೋಗದ ಪ್ರಮಾಣವನ್ನು ಬಿಡುಗಡೆ ಮಾಡುವ ಜತೆಗೆ ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಸಮಗ್ರವಾದ ಉದ್ಯೋಗ ಮತ್ತು ನಿರುದ್ಯೋಗದ ಚಿತ್ರಣಗಳನ್ನು ನೀಡುತ್ತದೆ. ಸಿಎಂಐಇ ಸಂಸ್ಥೆಯ ಪ್ರಕಾರ 2022 ರಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಒಟ್ಟಾರೆ ಪ್ರಮಾಣವು ಶೇ.37.88 ರಷ್ಟಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಒಟ್ಟು ದುಡಿಮೆ ಮಾಡಲು ಬಯಸುವವರ ಸಂಖ್ಯೆ 2.49 ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದರೆ, ಯಾವುದೊ ಒಂದು ಉದ್ಯೋಗ ಲಭಿಸಿರುವುದು ಕೇವಲ 2.1 ಕೋಟಿ ಜನರಿಗೆ ಮಾತ್ರ. ಸುಮಾರು 30 ಲಕ್ಷ ಜನರಿಗೆ ಯಾವ ಉದ್ಯೋಗವೂ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
''ದಾಖಲೆ ಬಿಡುಗಡೆ ಮಾಡಿ, ಕ್ಷಮೆಯಾಚಿಸಿ''
67.9 ಲಕ್ಷ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿ ಜನರನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಂಚಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಸ್ಪಷ್ಟವಾದ ದಾಖಲೆಗಳನ್ನು ಬಿಡುಗಡೆ ಮಾಡಬೇಕು.ಅಲ್ಲದೆ, ಈ ಮಹಾ ಸುಳ್ಳಿನ ಕುರಿತು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.