ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಮರುದಿನವೇ ಸಂಸತ್ತಿನಿಂದ ರಾಹುಲ್ ಗಾಂಧಿ ಅನರ್ಹ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಉಪನಾಮದ ಕುರಿತ ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸೂರತ್ ನ್ಯಾಯಾಲಯವು ದೋಷಿ ಎಂದು ತೀರ್ಮಾನಿಸಿದ ಬೆನ್ನಲ್ಲೇ ಇದೀಗ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿದೆ ಎಂದು ndtv.com ವರದಿ ಮಾಡಿದೆ.
"ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ರಾಹುಲ್ ಗಾಂಧಿ ಅವರು ಶಿಕ್ಷೆಗೆ ಗುರಿಯಾದ 23 ಮಾರ್ಚ್, 2023 ರಿಂದ ಭಾರತದ ಸಂವಿಧಾನದ ಆರ್ಟಿಕಲ್ 102(1)(ಇ) ನ ಪರಿಚ್ಛೇದ ಹಾಗೂ 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ಪ್ರಕಾರ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ " ಎಂದು ಲೋಕಸಭೆಯ ಸಚಿವಾಲಯ ಇಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಅಧಿಸೂಚನೆಗೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, "ಈ ನಿರ್ಧಾರವು ತಪ್ಪು. ಲೋಕಸಭಾ ಸಚಿವಾಲಯವು ಸಂಸದರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಅದನ್ನು ಮಾಡಬೇಕು" ಎಂದು NDTV ಗೆ ತಿಳಿಸಿದರು.