ನಿರ್ಮಲಾನಂದನಾಥ ಸ್ವಾಮೀಜಿ ವಿರುದ್ಧ ಹೇಳಿಕೆ: ಕ್ಷಮೆಯಾಚಿಸಿದ ಅಡ್ಡಂಡ ಸಿ.ಕಾರ್ಯಪ್ಪ
ಮೈಸೂರು,ಮಾ.24: ಒಕ್ಕಲಿಗ ಸಮುದಾಯದ ಪ್ರತಿಭಟನೆ ಹಿನ್ನಲೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರ್ಮಲಾನಂದನಾಥ ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಸ್ವಾಮೀಜಿಗಳ ಬಗ್ಗೆ ಲಘುವಾಗಿ ಮಾತನಾಡಿಲ್ಲ, ಆದರೂ ನನ್ನ ಹೇಳಿಕೆಯನ್ನು ತಿರುಚಿ ಗೊಂದಲ ಉಂಟು ಮಾಡಲಾಗಿದೆ ಎಂದು ಹೇಳಿದರು.
ನಿರ್ಮಲಾನಂದನಾಥ ಸ್ವಾಮೀಜಿಗಳು ಈ ನಾಡಿನ ಸಂತರಲ್ಲಿ ಒಬ್ಬರು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ನಾನು ಹೇಳಿರುವ ಹೇಳಿಕೆಯನ್ನು ಮಾಧ್ಯಮಗಳು ತಮಗೆ ಬೇಕಾದ ರೀತಿಯಲ್ಲಿ ತಿರುಚಿವೆ. ಆದರೂ ನಿರ್ಮಲಾನಂದನಾಥ ಸ್ವಾಮೀಜಿಗಳಲ್ಲಿ ಕ್ಷಮೆ ಯಾಚಿಸುತ್ತೇನೆ. ಅವರ ವಿರುದ್ಧ ಯಾವುದೇ ರೀತಿ ಲಘು ಹೇಳಿಕೆ ಅಥವಾ ಅಪಮಾನ ಮಾಡುವಂತೆ ಹೇಳಿಕೆಗಳನ್ನು ನೀಡಿಲ್ಲ. ಅವರಿಗೆ ಅಪಮಾನ ಮಾಡಿಲ್ಲ. ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.
ನಾನು ನಿರ್ಮಲಾನಂದನಾಥ ಸ್ವಾಮೀಜಿಗಳ ಪರಮ ಭಕ್ತ, ಒಕ್ಕಲಿಗರ ಮೇಲೆ ಅಪಾರ ಪ್ರೀತಿ ಇದೆ. ನಾನು ಒಕ್ಕಲಿಗ ವಿರೋಧ ಅಲ್ಲ, ರಾಜಕೀಯವಾಗಿ ಈ ವಿಚಾರ ಎಳೆಯುವುದು ಸರಿಯಲ್ಲ. ರಂಗಾಯಣದ ಮುಂದೆ ಪ್ರತಿಭಟನೆ ಮಾಡುವವರ ಕ್ಷಮೆ ಕೇಳುವುದಿಲ್ಲ. ಶ್ರೀಗಳಲ್ಲಿ ಮಾತ್ರ ಕ್ಷಮೆ ಯಾಚಿಸುತ್ತೇನೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡುವಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸ್ವಾಮೀಜಿಗಳು ಡಿ.ಕೆ.ಶಿವಕುಮಾರ್‍ಗೆ ಬೆಂಬಲ ಸೂಚಿಸುವಂತೆ ಸಲಹೆ ನೀಡಿದ್ದರು ಎಂಬ ಪತ್ರಿಕಾ ವರದಿ ಆಧಾರವಾಗಿ ನಾನು ಮಾತನಾಡಿದ್ದೆ ಎಂದು ಹೇಳಿದ್ದಾರೆ.