ಡಬಲ್ ಇಂಜಿನ್ ಸರ್ಕಾರವು ಬಡವರ ಹಿತ ಕಾಯಲು ಬದ್ಧ: ಪ್ರಧಾನಿ ನರೇಂದ್ರ ಮೋದಿ

Update: 2023-03-25 14:49 GMT

ದಾವಣಗೆರೆ : ದಾವಣಗೆರೆಯು ಟೆಕ್ಸ್ ಟೈಲ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ನಮ್ಮ ಸರ್ಕಾರ ದೇಶದಲ್ಲಿ 7 ಮೆಗಾ ಟೆಕ್ಸ್ ಟೈಲ್ ಪಾರ್ಕ್ ನಿರ್ಮಿಸಲು ಉದ್ದೇಶಿಸಿದ್ದು, ಅದರಲ್ಲಿ ಒಂದು ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದ ಜಿಎಂಐಟಿ ಬಳಿ ಬಿಜೆಪಿಯಿಂದ ಏರ್ಪಡಿಸಿದ್ದ ವಿಜಯಸಂಕಲ್ಪ ಯಾತ್ರೆ ಮಹಾಸಂಗಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಕರ್ನಾಟಕದ ಮೂಲಸೌಕರ್ಯ, ತಂತ್ರಜ್ಞಾನ, ಉತ್ಪಾದನೆ ಕ್ಷೇತ್ರ ವಿಸ್ತಾರವಾಗಲಿದೆ. ಪರಂಪರೆ, ತಂತ್ರಜ್ಞಾನದಲ್ಲಿ ಮುಂದಿರುವ ಕರ್ನಾಟಕದಲ್ಲಿ ಯುವಕರಿಗೆ ವಿಪುಲ ಅವಕಾಶಗಳಿವೆ. ಇದೆಲ್ಲದರ ಸಾಕಾರಕ್ಕೆ ರಾಜ್ಯದಲ್ಲಿ ಬಿಜೆಪಿಯ ಸ್ಥಿರ ಸರ್ಕಾರ ಅಗತ್ಯವಿದೆ ಎಂದರು.

ಭಾರತದದಲ್ಲಿ ದೀರ್ಘಕಾಲ ಆರೋಪದ ರಾಜಕೀಯ ನಡೆದಿದೆ. ಬಿಜೆಪಿಯು ಈ ಕೊಳಕು ರಾಜಕೀಯ ಸ್ಥಿತಿ ಬದಲಿಸಿ, ಅಭಿವೃದ್ಧಿ ಪರ್ವ ಆರಂಭಿಸಿದೆ. ಶಿವಮೊಗ್ಗ ಏರ್ಪೋರ್ಟ್, ಹುಬ್ಬಳ್ಳಿ ಜಂಕ್ಷನ್, ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ, ಧಾರವಾಡ ಐಐಟಿ ಶಾಶ್ವತ ಕ್ಯಾಂಪಸ್, ಜಲಜೀವನ ಮಿಷನ್ ಹೀಗೆ ಎಣಿಸುತ್ತಲೇ ಹೋಗಬಹುದಾದ ಸಾಕಷ್ಟು ಯೋಜನೆಗಳನ್ನು ಇದೇ ವರ್ಷದ ಮೊದಲ ಮೂರು ತಿಂಗಳಲ್ಲಿ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ನುಡಿದರು. 

ಡಬಲ್ ಇಂಜಿನ್ ಸರ್ಕಾರವು ಉಚಿತ ರೇಷನ್‍ನಿಂದ ಉಚಿತ ಆರೋಗ್ಯದವರೆಗೆ ಬಡವರ ಹಿತ ಕಾಯಲು ಬದ್ಧವಾಗಿದೆ. ರಾಜ್ಯದಲ್ಲಿ 40 ಲಕ್ಷ ಹೊಸ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೀಡುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಹರಿಹರೇಶ್ವರ, ಭುವನೇಶ್ವರಿಗೆ, ಪವಿತ್ರ ಮಠಗಳಿಗೆ ಆದರಪೂರ್ವಕವಾಗಿ ವಂದಿಸುತ್ತೇನೆ. ಹರಿಹರ-ದಾವಣಗೆರೆ ಮಧ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ತುಂಗಭದ್ರಾ ತಾಯಿ ಆಶೀರ್ವಾದವಿದೆ. ಹರಿ ಹಾಗೂ ಹರರ ಸಮನ್ವಯ ಕ್ಷೇತ್ರದಲ್ಲಿ 4 ವಿಜಯ ಸಂಕಲ್ಪ ಯಾತ್ರೆಗಳ ಮಹಾಸಂಗಮವಾಗಿದ್ದು, ರಾಜ್ಯದ ವಿಕಾಸಕ್ಕಾಗಿ ಡಬಲ್ ಇಂಜಿನ್ ಸರ್ಕಾರಕ್ಕೆ ಜನರ ಆಶೀರ್ವಾದವಿರುವುದು ಮನದಟ್ಟಾಗಿದೆ ಎಂದರು.  

ಯಾತ್ರೆ ಮಾಡಿ ಬಂದವರ ದರ್ಶನ ಮಾಡಿದರೆ ಪುಣ್ಯ ಸಿಗುವಂತೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನನಗೂ ಪುಣ್ಯ ಸಿಕ್ಕಿದೆ. ಈ ಯಶಸ್ವಿ ಯಾತ್ರೆಗಾಗಿ ಎಲ್ಲ ಕಾರ್ಯಕರ್ತರಿಗೆ ಹೃದಯಪೂರ್ವಕ ಅಭಿನಂದಿಸುತ್ತೇನೆ. ನಾನು ದಿನವೂ ನಿರಂತರವಾಗಿ ಯಾತ್ರೆಯ ಆಗು-ಹೋಗು ತಿಳಿದುಕೊಳ್ಳುತ್ತಿದೆ. ಜನರ ಹುಮ್ಮಸ್ಸು, ಬೆಂಬಲ ಅಭೂತಪೂರ್ವವಾಗಿದ್ದು, ಈಗ ನಮ್ಮ ಜವಾಬ್ದಾರಿ ಪೂರ್ಣಗೊಳಿಸಬೇಕಿದೆ. ಇದೇ ಉತ್ಸಾಹ, ಜನಬೆಂಬಲವನ್ನು ಮುಂದಿನ ಮೂರು ತಿಂಗಳು ಪ್ರತಿ ಬೂತ್‍ನಲ್ಲಿ ತಲುಪಿಸಬೇಕು. ಪ್ರತಿ ಬೂತ್ ಗೆಲ್ಲುವ ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

2019ರಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಶುರು ಮಾಡಿದಾಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವಿತ್ತು. ಕಡಿಮೆ ಸಂಖ್ಯೆಯ ರೈತರು ಯೋಜನೆಯ ಲಾಭ ಪಡೆಯುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಿಕೊಂಡು, ಈಗ 80 ಲಕ್ಷ ರೈತರು ಯೋಜನೆ ಲಾಭ ಪಡೆಯುವಂತಾಗಿದೆ. ದಾವಣಗೆರೆ ಜಿಲ್ಲೆಯ ರೈತರಿಗೂ 350 ಕೋಟಿ ರೂ. ತಲುಪಿದೆ. ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರವೂ ಹಣ ಸೇರಿಸಿ ರೈತರಿಗೆ ಕೊಡುತ್ತಿದೆ. ಇದೇ ಡಬಲ್ ಇಂಜಿನ್ ಸರ್ಕಾರದ ಡಬಲ್ ಲಾಭ.

ದಲಿತರು, ಆದಿವಾಸಿ, ವನವಾಸಿ, ಮಹಿಳೆಯರು, ಹಿರಿಯರು ಸೇರಿದಂತೆ ಸೌಲಭ್ಯ ವಂಚಿತರಿಗೆ ಆದ್ಯತೆ ನೀಡುವುದು ಪ್ರತಿ ಹೆಜ್ಜೆಯಲ್ಲೂ ಕಾಣುತ್ತದೆ. ಇದು ನಮ್ಮ ಸಂಕಲ್ಪ ತೋರಿಸುತ್ತದೆ. ಅಭಿವೃದ್ಧಿಯೇ ನಮ್ಮ ಮಂತ್ರ ಎಂದರು.

ಕರ್ನಾಟಕವು ಅನೇಕ ಅವಕಾಶವಾದಿ, ಸ್ವಾರ್ಥಿ ಮೈತ್ರಿ ಸರ್ಕಾರಗಳನ್ನು ನೋಡಿದೆ. ಅಂತಹ ಸರ್ಕಾರಗಳಿಂದ ರಾಜ್ಯಕ್ಕೆ ಯಾವಾಗಲೂ ನಷ್ಟವಾಗಿದೆ. ರಾಜ್ಯದ ಅಭಿವೃದ್ಧಿಗೆ ಪೂರ್ಣ ಬಹುಮತದ ಸರ್ಕಾರ ಅಗತ್ಯವಿದೆ. ರಾಜ್ಯವನ್ನು ಒಡೆದಾಳುವ ರಾಜಕೀಯದಿಂದ ಹೊರಗೆ ತಂದು ವೇಗವಾಗಿ ಅಭಿವೃದ್ಧಿಗೊಳಿಸಬೇಕಾದ್ದು ಈಗ ಆಗಬೇಕಿರುವ ಮೊದಲ ಕೆಲಸ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಇದು ಅಗತ್ಯವಾಗಿದೆ.  ನಾನೂ ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಸೇವೆ ಮಾಡಬೇಕಾದರೆ ಬಿಜೆಪಿಯ ಸ್ಥಿರ ಸರ್ಕಾರ ಕೊಡಬೇಕು. ಬಿಜೆಪಿ ಪಕ್ಷವು ಕರ್ನಾಟಕವನ್ನು ವಿಕಾಸ ಮಾಡಲು ಬಯಸಿದೆ. ಆದರೆ ಕಾಂಗ್ರೆಸ್ ಪಕ್ಷವು ರಾಜ್ಯವನ್ನು ನಾಯಕರ ಜೇಬು ತುಂಬುವ ಎಟಿಎಂನಂತೆ ನೋಡುತ್ತಿದೆ ಎಂದು ದೂರಿದರು. 

ಚುನಾವಣೆ ಸಂದರ್ಭದಲ್ಲಿ ಇವರು ಗ್ಯಾರಂಟಿ ಕಾರ್ಡ್ ಹಿಡಿದು ಜನರ ಬಳಿ ಹೋಗುತ್ತಿದ್ದಾರೆ. ಇವರ ಆಟವನ್ನು ಹಿಮಾಚಲ ಪ್ರದೇಶದಲ್ಲಿ ನೋಡಿದ್ದಾಗಿದೆ. ಚುನಾವಣೆ ಮೊದಲು ದೊಡ್ಡ ದೊಡ್ಡ ವಾಗ್ದಾನ ಮಾಡಿದ್ದರು. ಆದರೆ ಮೊದಲ ಬಜೆಟ್‍ನಲ್ಲಿ ಚುನಾವಣೆ ಸಂದರ್ಭದಲ್ಲಿನ ಒಂದೂ ವಾಗ್ದಾನ ಕಾಣುತ್ತಿಲ್ಲ. ಅಂತಹ ಕಾಂಗ್ರೆಸ್ ಮೇಲೆ ವಿಶ್ವಾಸವಿಡಬೇಡಿ. ಸುಳ್ಳು ಭರವಸೆ ನೀಡುವ ಪಕ್ಷಕ್ಕೆ ರಾಜ್ಯದಲ್ಲಿ ಕಾಲಿಡಲು ಕೂಡ ಜಾಗ ನೀಡದೆ ಪೂರ್ಣವಾಗಿ ತೆಗೆದು ಹಾಕಿರಿ ಎಂದು ಕರೆ ನೀಡಿದರು. 

ಹಿಮಾಚಲ ಪ್ರದೇಶದ ಜನರಿಗೆ ಬಂದ ಸ್ಥಿತಿ ನಿಮಗೆ ಬಾರದಂತೆ ಕರ್ನಾಟಕದ ಜನ ಎಚ್ಚರವಾಗಿರಬೇಕು. ಇಲ್ಲೂ ಕಾಂಗ್ರೆಸ್ಸಿಗರು ಅದೇ ಆಟವಾಡಲು ಅವಕಾಶ ಕೊಡಬೇಡಿ. ಕಾಂಗ್ರೆಸ್ಸಿಗೆ ದೇಶ, ರಾಜ್ಯಕ್ಕಾಗಿ ಯಾವುದೇ ಸಕಾರಾತ್ಮಕ ದೃಷ್ಟಿಕೋನ ಇಲ್ಲ.  ಮೋದಿ ನಿನ್ನ ಸಮಾಧಿ ತೋಡುತ್ತೇವೆ ಎಂಬುದಾಗಿ ಕಾಂಗ್ರೆಸ್ಸಿನವರು ಹೇಳುತ್ತಾರೆ. ಅವರಿಗೆ ಉತ್ತರವಾಗಿ ಮೋದಿ ನಿನ್ನ ಕಮಲ ಅರಳಿಸುತ್ತೇವೆ ಎಂದು ಕರ್ನಾಟಕದ ಜನ ಹೇಳಬೇಕು. ಕಮಲದಲ್ಲಿ ಸಮೃದ್ಧಿ, ಮುನ್ನಡೆಯುವ ವಿಶ್ವಾಸವಿದೆ. ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಆದರೆ ಭಾರತವು ಕರ್ನಾಟಕದತ್ತ ನೋಡುತ್ತಿದೆ. ಕರ್ನಾಟಕದಲ್ಲಿ ವಿಶ್ವವನ್ನು ಆಕರ್ಷಿಸುವ ಬೆಂಗಳೂರಿನಂತಹ ಅನೇಕ ಹಬ್‍ಗಳು ಆಗಬೇಕೆಂಬುದು ಬಿಜೆಪಿ ಕನಸು. ಈ ಕಾರಣಕ್ಕೆ ಕೊರೋನಾ ಕಾಲದಲ್ಲೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂದಿದೆ ಎಂದರು.   

ಇಷ್ಟು ಜನರನ್ನು ನೋಡಿ ಭಾವುಕನಾಗಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಒಂದು ವೀಡಿಯೋ ನೋಡಿದೆ. ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿಯೊಬ್ಬರು ಅದೇ ಪಕ್ಷದ ಕಾರ್ಯಕರ್ತನನ್ನು ಸಾರ್ವಜನಿಕವಾಗಿ ಹೊಡೆದು ಆನಂದಪಡುತ್ತಿದ್ದರು. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸಲಾಗದವರು ಜನರ ಬಗ್ಗೆ ಹೇಗೆ ಗೌರವಭಾವ ಹೊಂದಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯಲ್ಲಿ ಯಾರೂ ದೊಡ್ಡವರು, ಸಣ್ಣವರು ಅಲ್ಲ. ಇಲ್ಲಿ ಎಲ್ಲರೂ ಸರಿಸಮಾನರು. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ನನಗೆ ಪರಮಮಿತ್ರ, ಬಲಿಷ್ಠ ಜೊತೆಗಾರ, ಸಹೋದರ. ನನಗೆ ಪ್ರತಿ ಕಾರ್ಯಕರ್ತರ ಮೇಲೆ ವಿಶ್ವಾಸವಿದೆ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದರು. 

ಅಮೇರಿಕಾ, ಜರ್ಮನಿ, ಫ್ರಾನ್ಸ್, ಆಫ್ರಿಕಾ, ಸಿಂಗಾಪೂರ್, ಇಂಡೋನೇಷ್ಯಾ, ಜಪಾನ್ ಸೇರಿದಂತೆ ಜಗತ್ತಿನ ನಾಲ್ಕೂ ಕಡೆ ಭಾರತದ ಗುಣಗಾನವಾಗುತ್ತಿದೆ. ಇದು ಮೋದಿ ಕಾರಣದಿಂದ ಅಲ್ಲ. ನೀವು ನೀಡಿದ ಒಂದು ಮತದ ಕಾರಣದಿಂದ. ನಿಮ್ಮ ಒಂದು ಮತದ ಶಕ್ತಿಯಿಂದ ಭಾರತದ ಗುಣಗಾನವಾಗುತ್ತಿದೆ. ಅದೇ ರೀತಿ ಕರ್ನಾಟಕದ ಗುಣಗಾನವೂ ಆಗಬೇಕಿದೆ. ನಿಮ್ಮ ಮತದ ಶಕ್ತಿಯು ಕರ್ನಾಟಕದ ಶಕ್ತಿಯನ್ನು ಜಗತ್ತಿನಲ್ಲಿ ಹೆಚ್ಚಿಸುತ್ತದೆ. ಎಪ್ರಿಲ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮತ್ತೆ ಬರುತ್ತೇನೆ. ವಿಶ್ವ ಹುಲಿ ದಿನಾಚರಣೆಗೆ ಕರ್ನಾಟಕದ ಹುಲಿಗಳ ಮಧ್ಯೆ ಬರುತ್ತೇನೆ. ಹುಲಿಯ ಮೂಲಕ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಯೋಜನೆ ಘೋಷಣೆಯಾಗಲಿದೆ. ಕರ್ನಾಟಕದ ಪ್ರತಿ ಕಡೆ ಹೋಗುತ್ತಿದ್ದೇನೆ. ಜನ ನೀಡಿರುವ ಪ್ರೀತಿ, ಆಶೀರ್ವಾದ ಹೊಸ ಶಕ್ತಿ, ವಿಶ್ವಾಸ, ಹುಮ್ಮಸ್ಸು ನೀಡಿದೆ. ಈ ನೆಲದಿಂದ ಕರ್ನಾಟಕದ ಜನರಿಗೆ ತಲೆಬಾಗಿ ನಮಿಸುತ್ತೇನೆ. ನಿಮ್ಮೆಲ್ಲರ ಶ್ರಮ, ದೇಶಕ್ಕಾಗಿ ಬದುಕುವ ನಿಮ್ಮ ಸಂಕಲ್ಪ ಎಲ್ಲರಿಗೂ ಮಾದರಿ ಎಂದು ಹೇಳಿದರು.

''ಎಐಸಿಸಿ ಅಧ್ಯಕ್ಷರ ಕರ್ಮಭೂಮಿಯಲ್ಲಿ ಕಮಲಕ್ಕೆ ಗೆಲವು''

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಕರ್ಮಭೂಮಿಯಾದ ಕಲಬುರ್ಗಿ ಮೇಯರ್-ಉಪಮೇಯರ್ ಚುನಾವಣೆಯನ್ನು ಬಿಜೆಪಿಯವರು ಗೆದ್ದಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಮನೆಯಲ್ಲೇ ಬಿಜೆಪಿ ವಿಜಯ ದುಂಧುಬಿ ಮೊಳಗಿದೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತ. ಇಂದಿನಿಂದ ನಮ್ಮ ವಿಜಯಯಾತ್ರೆ ಆರಂಭವಾಗಿದೆ. ಡಬಲ್ ಇಂಜಿನ್ ಸರ್ಕಾರದ ಮರುಸ್ಥಾಪನೆಗೆ ರಾಜ್ಯ ನಿರ್ಧರಿಸಿರುವುದರ ಸಂಕೇತವಿದು ಎಂದು ಹೇಳಿದರು.

ನನಗೆ ದಾವಣಗೆರೆಗೆ ಬಂದ ಪ್ರತಿ ಬಾರಿಯೂ ನಿಮ್ಮ ಆಶೀರ್ವಾದ, ಪ್ರೀತಿ ಹೆಚ್ಚುತ್ತಲೇ ಇದೆ. ನಿಮ್ಮೆಲ್ಲರ ದರ್ಶನ ಪಡೆದು ವೇದಿಕೆಗೆ ಬರಲು ಅನುವು ಮಾಡಿಕೊಟ್ಟ ರಾಜ್ಯ ಬಿಜೆಪಿಗೆ ಧನ್ಯವಾದ ಸಲ್ಲಿಸುತ್ತೇನೆ. ನಿಮ್ಮೆಲ್ಲರ ದರ್ಶನ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ವಿಜಯ ಸಂಕಲ್ಪ ಯಾತ್ರೆಯು ವಿಜಯ ಮಹೋತ್ಸವ ಆಚರಿಸುವ ಯಾತ್ರೆಯಂತಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಪ್ರಹ್ಲಾದ ಜೋಷಿ, ರಾಜೀವ ಚಂದ್ರಶೇಖರ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಶ್ರೀರಾಮುಲು, ಗೋವಿಂದಕಾರಜೋಳ, ಬೈರತಿ ಬಸವರಾಜ್, ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್, ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ಇದ್ದರು.  

Similar News