ಯಾದಗಿರಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ: ದಂಪತಿ ಸಜೀವ ದಹನ
ಯಾದಗಿರಿ, ಮಾ.27: ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ದಂಪತಿ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ತಾಲೂಕಿನ ಸೈದಾಪುರ ಪಟ್ಟಣದಿಂದ ವರದಿಯಾಗಿದೆ.
ಕೆ.ಬಿ.ರಾಘವೇಂದ್ರ (39), ಶಿಲ್ಪಾ ರಾಘವೇಂದ್ರ (32) ಮೃತಪಟ್ಟವರು. ರವಿವಾರ ತಡರಾತ್ರಿ ಈ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಬಟ್ಟೆ ಅಂಗಡಿ ವ್ಯಾಪಾರಿಗಳಾಗಿದ್ದ ಈ ದಂಪತಿ ಮನೆಯ ಎರಡು ಮಹಡಿಗಳ ಪೈಕಿ ಒಂದನ್ನು ಹಾಗೂ ಮನೆಯ ಟೇರಸ್ ನಲ್ಲಿ ತಗಡು ಶೀಟ್ ನಲ್ಲಿ ಗೋದಾಮು ನಿರ್ಮಿಸಿ ಬಟ್ಟೆಗಳನ್ನು ಶೇಖರಿಸಿ ಇಟ್ಟಿದ್ದರು. ಒಂದನೇ ಮಹಡಿಯಲ್ಲಿ ಅವರು ವಾಸವಿದ್ದರು. ಎಂದಿನಂತೆ ವ್ಯವಹಾರ ಮುಗಿಸಿ ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ಮಲಗಿದ್ದರು. ಸೋಮವಾರ ಮುಂಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಮನೆಯೊಳಗೆ ಸಿಲುಕಿಕೊಂಡ ದಂಪತಿಗೆ ಹೊರಬರಲು ಸಾಧ್ಯವಾಗಿಲ್ಲ. ರಕ್ಷಣೆಗಾಗಿ ಬಾತ್ ರೂಮ್ ಒಳಗೆ ಸೇರಿಕೊಂಡಿದ್ದ ಅವರಿಬ್ಬರು ದಟ್ಟ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸಿಬಿ ವೇದಮೂರ್ತಿ ತಿಳಿಸಿದ್ದಾರೆ.
ಅವಘಡದಲ್ಲಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಬಟ್ಟೆಗಳೆಲ್ಲಾ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಮನೆಯ ಕೆಳಗಿನ ಅಂತಸ್ತಿನಲ್ಲಿ ಅಜ್ಜ-ಅಜ್ಜಿಯ ಜೊತೆಗಿದ್ದ ರಾಘವೇಂದ್ರ ದಂಪತಿಯ ಇಬ್ಬರು ಪುತ್ರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.