ವಿದ್ಯುತ್ ತಂತಿಗಳನ್ನು ಕದ್ದ ಆರೋಪದಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ
ಸಂಗಾರೆಡ್ಡಿ: ವಿದ್ಯುತ್ ತಂತಿಗಳನ್ನು ಕದ್ದನೆಂಬ ಆರೋಪದಲ್ಲಿ 30 ವರ್ಷದ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಥಳಿಸಿರುವುದರಿಂದ ಆ ವ್ಯಕ್ತಿಯು ಮೃತಪಟ್ಟಿರುವ ಘಟನೆ ರವಿವಾರ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನನ್ನು ಥಳಿಸಿ, ವಿದ್ಯುತ್ ಆಘಾತ ನೀಡಿ ಹತ್ಯೆಗೈಯ್ಯಲಾಗಿದೆ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಮಲ್ಲೇಶ್ ಎಂಬ ವ್ಯಕ್ತಿಯನ್ನು ಗುಮ್ಮಡಿಡಲ ಗ್ರಾಮದಲ್ಲಿ ರವಿವಾರ ಬೆಳಗ್ಗೆ ತೋಟದ ಮನೆಯಿಂದ ವಿದ್ಯುತ್ ತಂತಿಗಳನ್ನು ಕದ್ದನೆಂದು ಆರೋಪಿಸಿ ಕೆಲ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ನಂತರ ಆತನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವುದರಿಂದ ಆತ ಮೃತಪಟ್ಟಿದ್ದಾನೆ. ಮಲ್ಲೇಶ್ ಅದೇ ಗ್ರಾಮದ ನಿವಾಸಿಯಾಗಿದ್ದ ಎಂದು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಮೃತನ ಕುಟುಂಬದ ಸದಸ್ಯರು, "ಆತನನ್ನು ಥಳಿಸಿ, ವಿದ್ಯುತ್ ಆಘಾತ ನೀಡಲಾಗಿದೆ. ಇದು ಸಮರ್ಥನೀಯವೇ? ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕಿತ್ತು. ಆದರೆ, ಇದೆಂಥ ವ್ಯವಸ್ಥೆ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ವ್ಯಕ್ತಿಗೆ ವಿದ್ಯುತ್ ಆಘಾತ ನೀಡಲಾಗಿತ್ತು ಎಂಬ ಆರೋಪದ ಕುರಿತು ಪೊಲೀಸರನ್ನು ಪ್ರಶ್ನಿಸಿದಾಗ, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹತ್ಯೆಯಲ್ಲಿ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮನವಿ ಮಾಡದಿದ್ದರೂ ಎಸ್‌ಬಿಐಗೆ 8,800 ಕೋಟಿ ನೆರವು ನೀಡಿದ ಕೇಂದ್ರ ಸರ್ಕಾರ!