ಡಾ.ಕೆ.ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ
ಬ್ರಹ್ಮಾವರ, ಮಾ.28: ಕನ್ನಡದ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ, ಲೇಖಕ, ಬಹುಮುಖ ಪ್ರತಿಭೆಯ ಡಾ.ಕೋಟ ಶಿವರಾಮ ಕಾರಂತರ ಆಪ್ತ ಸಹಾಯಕಿಯಾಗಿದ್ದ ಮಾಲಿನಿ ಮಲ್ಯ ಅವರು ಅಸೌಖ್ಯದಿಂದ ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
72 ವರ್ಷ ಪ್ರಾಯದ ಮಾಲಿನಿ ಮಲ್ಯ ಅವಿವಾಹಿತರಾಗಿದ್ದರು. ಸುಧೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತಿದ್ದ ಮಾಲಿನಿ ಮಲ್ಯ ಅವರು ಸುಮಾರು ಒಂದು ವರ್ಷದ ಹಿಂದೆ ಬೆಂಗಳೂರಿಗೆ ತೆರಳಿ ಸಂಬಂಧಿಕ ರೊಬ್ಬರ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.
ಉಡುಪಿಯಲ್ಲಿ ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದ ಕೋಟದ ಮಾಲಿನಿ ಮಲ್ಯ ಅವರನ್ನು ಕುಟುಂಬ ಸ್ನೇಹಿತರೊಬ್ಬರು ಕಾರಂತರು ಬರೆಯುತಿದ್ದ ಕಾದಂಬರಿಯನ್ನು ಶೀಘ್ರಲಿಪಿಯಲ್ಲಿ ಬರೆದು ಬೆರಳಚ್ಚು ಮಾಡಲು ನೇಮಿಸಿದ್ದರು. ಹೀಗೆ ಕಾರಂತರ ಸಂಪರ್ಕಕ್ಕೆ ಬಂದ ಮಾಲಿನಿ ಮಲ್ಯ ಕೊನೆಯ ವರೆಗೂ ಅವರ ಆಪ್ತಸಹಾಯಕಿಯಾಗಿ ಕಾರ್ಯನಿರ್ವಹಿಸಿದ್ದರು.
ಕಾರಂತರ ಸ್ಪೂರ್ತಿಯಿಂದ ಲೇಖಕಿಯಾಗಿಯೂ ಬದಲಾದ ಮಾಲಿನಿ ಮಲ್ಯ, ನಾ ಕಂಡ ಕಾರಂತರು ಎಂಬ ಕೃತಿಯಲ್ಲದೇ, ಶಿವರಾಮ ಕಾರಂತ ವ್ಮಾಯ ವೃತ್ತಾಂತ ಎಂಬ ಸಂಪಾದಿತ ಕೃತಿಯನ್ನು ರಚಿಸಿದ್ದರು. ಅಲ್ಲದೇ ಶಿವರಾಮ ಕಾರಂತ ಕೈಪಿಡಿ, ಶಿವರಾಮ ಕಾರಂತರ ಲೇಖನ ಸಂಪುಟಗಳು, ಚಿಣ್ಣರ ಲೋಕದಲ್ಲಿ ಕಾರಂತರು ಸಂಪಾದಿತ ಕೃತಿಗಳೊಂದಿಗೆ, ಕಾರಂತರ ಕಿನ್ನರ ಲೋಕ ಸಂಶೋಧನಾ ಕೃತಿಯೂ ಸೇರಿದಂತೆ 30ಕ್ಕೂ ಅಧಿಕ ಪುಸ್ತಕ ಪ್ರಕಟಿಸಿದ್ದರು. ಬಾಳಿಗೊಂದು ಉತ್ತರ ಇವರ ಆತ್ಮಕಥನವಾಗಿದೆ.
ಕಾರಂತರ ನಿಧನದ ನಂತರ ಅವರು ಕೊನೆಯ ದಿನಗಳಲ್ಲಿ ವಾಸವಾಗಿದ್ದ ಸಾಲಿಗ್ರಾಮದ ತನ್ನ ಮನೆಯನ್ನು ಕಾರಂತರ ವಸ್ತುಸಂಗ್ರಹಾಲಯವಾಗಿ ಮಾಡಿ ಅದರಲ್ಲಿ ಕಾರಂತರು ಬಳಸುತಿದ್ದ ವಸ್ತುಗಳು, ಅವರ ಸಾಹಿತ್ಯ ಹಾಗೂ ಸಾಹಿತ್ಯೇತರ ವಸ್ತುಗಳನ್ನು ಸಂರಕ್ಷಿಸಿ ಇಟ್ಟಿದ್ದು ಆಸಕ್ತರಿಗೆ ಅವುಗಳನ್ನು ವಿವರಣೆಯೊಂದಿಗೆ ತೋರಿಸುತಿದ್ದರು. ಕಾರಂತರ ಎಲ್ಲಾ ಕೃತಿಗಳ ಹಕ್ಕುಸಾಮ್ಯ ಹೊಂದಿದ್ದ ಅವರು ಕೃತಿಗಳನ್ನು ಮರುಮುದ್ರಿಸುವಲ್ಲಿ ಶ್ರಮಿಸಿದ್ದರು. ಡಾ.ಶಿವರಾಮ ಕಾರಂತ ಪ್ರತಿಷ್ಠಾನವನ್ನು ಅವರು ಸ್ಥಾಪಿಸಿದ್ದರು.