ಬಸ್ ಅಪಘಾತ: ಓರ್ವ ಪ್ರಯಾಣಿಕ ಮೃತ್ಯು, ಹಲವು ಮಂದಿ ಗಾಯ

Update: 2023-03-29 15:14 GMT
ಬಸ್ ಅಪಘಾತ: ಓರ್ವ ಪ್ರಯಾಣಿಕ ಮೃತ್ಯು, ಹಲವು ಮಂದಿ ಗಾಯ
  • whatsapp icon

ಕೊಲ್ಲೂರು, ಮಾ.29: ಬಸ್ಸೊಂದು ಚರಂಡಿಗೆ ಬಿದ್ದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರೊಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡು ಘಟನೆ ಮಾ.29ರಂದು ನಸುಕಿನ ವೇಳೆ 2.30ರ ಸುಮಾರಿಗೆ ಜಡ್ಕಲ್ ಗ್ರಾಮದ ಹಾಲ್ಕಲ್ ತಿರುವು ಇಳಿಜಾರು ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಬಸವರಾಜ ಶಿರಟ್ಟಿ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಜನಕೊಂಡದಿಂದ ಮಂಗಳೂರಿಗೆ ಹೋಗುವ ದುರ್ಗಾಂಬಾ ಬಸ್ಸಿನಲ್ಲಿ ಅಂದಾಜು 35ರಿಂದ 40 ಜನ ಪ್ರಯಾಣಿಸುತ್ತಿದ್ದು, ಬಸ್ ಹಾಲ್ಕಲ್ ತಿರುವು ಇಳಿಜಾರು ರಸ್ತೆಯಲ್ಲಿ ಅತೀ ವೇಗವಾಗಿ ಬಂದ ಪರಿಣಾಮ ಹತೋಟಿ ತಪ್ಪಿಚರಂಡಿಗೆ ಬಿದ್ದು, ಬಳಿಕ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಬಸ್ಸಿನ ಮೇಲೆ ಬಿತ್ತು. ಇದರಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಲವು ಮಂದಿ ಗಾಯಗೊಂಡರೆಂದು ತಿಳಿದುಬಂದಿದೆ.‌

ಇದರಲ್ಲಿ ಗಂಭೀರವಾಗಿ ಗಾಯಗೊಂಡ ಬಸವರಾಜ ಶಿರಟ್ಟಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಅಪಘಾತದಲ್ಲಿ ಚಿತ್ರದುರ್ಗದ ರಂಗಪ್ಪ, ಅವರ ಮಗ ಗಿರೀಶ್, ದೇವೆಂದ್ರಪ್ಪಮತ್ತು ಮಲ್ಲೇಶ್, ಹಾಲಸ್ವಾಮಿ ಸೇರಿದಂತೆ ಹಲವು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News