ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ: ಆಯೋಗಕ್ಕೆ ಧನ್ಯವಾದ ತಿಳಿಸಿದ KUWJ
ಬೆಂಗಳೂರು, ಮಾ.29: ವಿಧಾನಸಭೆ ಚುನಾವಣೆಯಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಮನವಿ ಮಾಡಿದ್ದು, ಅದನ್ನು ಆಯೋಗ ಪುರಸ್ಕರಿಸಿದೆ ಎಂದು ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಬುಧವಾರ ಪ್ರಕಟನೆ ನೀಡಿರುವ ಅವರು, ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ಇಂಥದೊಂದು ಅವಕಾಶವನ್ನು ಆಯೋಗ ಕಲ್ಪಿಸಿದೆ. ಇದರಿಂದಾಗಿ ನಾನಾ ಕಡೆಯಲ್ಲಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯ ನಿರತ ಪತ್ರಕರ್ತರು ಮತದಾನ ವಂಚಿತರಾಗುವುದು ತಪ್ಪಿದಂತಾಗಿದೆ ಎಂದು ತಿಳಿಸಿದ್ದಾರೆ.
ಆನ್‍ಲೈನ್ ವೋಟಿಂಗ್ ಅವಕಾಶ ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೆಯುಡಬ್ಲ್ಯೂಜೆ ಪತ್ರ ಬರೆದಿತ್ತು. ದೃಶ್ಯ ಮುದ್ರಣ, ರೇಡಿಯೋ ಮಾಧ್ಯಮಗಳ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಪ್ರತಿ ಚುನಾವಣೆ ವೇಳೆಯಲ್ಲೂ ಮತದಾನದಿಂದ ವಂಚಿತರಾಗುತ್ತಿದ್ದಾರೆ ಎನ್ನುವ ವಿಷಯವನ್ನು ಗಮನಕ್ಕೆ ತಂದಿತ್ತು. ಕಾರ್ಯದೊತ್ತಡದ ನಡುವೆ ತಮ್ಮ ಸ್ವಂತ ಕ್ಷೇತ್ರಗಳಿಗೆ ಹೋಗಿ ಮತದಾನ ಮಾಡಲು ಆಗುತ್ತಿಲ್ಲ. ಹೀಗಾಗಿ ಬಹುತೇಕ ಪತ್ರಕರ್ತರು ಮತದಾನದಿಂದ ದೂರವೇ ಉಳಿಯುತ್ತಿದ್ದಾರೆ. ಆದುದರಿಂದ ಅಗತ್ಯವಿರುವ ಪತ್ರಕರ್ತರಿಗೂ ಆನ್‍ಲೈನ್ ಮೂಲಕ ಮತದಾನ ಮಾಡುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೆಯುಡಬ್ಲ್ಯೂಜೆ ವಿನಂತಿಸಿಕೊಂಡಿತ್ತು.