ಪ್ರಚೋದನಕಾರಿ ಹೇಳಿಕೆ: ಸಚಿವ ಮುನಿರತ್ನ ಬಂಧನಕ್ಕೆ ಡಿ.ಕೆ.ಸುರೇಶ್ ಆಗ್ರಹ

Update: 2023-03-31 15:22 GMT

ಬೆಂಗಳೂರು: ಸಚಿವ ಮುನಿರತ್ನ ಆರ್.ಆರ್.ನಗರ ಕ್ಷೇತ್ರದಲ್ಲಿ ತಮಿಳಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿ ದ್ವೇಷವನ್ನು ಸಾರುತ್ತಿದ್ದಾರೆ. ಯಾರೇ ಮತ ಕೇಳಿಕೊಂಡು ಬಂದರೂ ಅವರನ್ನು ಹೊಡೆಯಿರಿ, ಸಾಯಿಸಿರಿ ಎಂದು ಕನ್ನಡಿಗ ಹಾಗೂ ಒಕ್ಕಲಿಗ ಹೆಣ್ಣುಮಗಳ ವಿರುದ್ಧ ಪ್ರಚೋದನೆ ನೀಡಿ ಚುನಾವಣೆ ಗೆಲ್ಲಲು ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಸಚಿವ ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. 

ಒಕ್ಕಲಿಗರನ್ನು ಗುರಿಯಾಗಿಸಿ ಸಿನಿಮಾ ತೆಗೆದು ಹಣ ಮಾಡಲು ಮುಂದಾಗುವ ಮುನಿರತ್ನ, ಪೊಲೀಸ್ ಅಧಿಕಾರಿಗಳ ಮುಂದೆ ಎಲ್ಲರೂ ಫೋನ್ ಆಫ್ ಮಾಡಿ, ಯಾರೂ ವಿಡಿಯೋ ಮಾಡಬೇಡಿ ಎಂದು ಹೇಳಿ, ಇಲ್ಲಿಗೆ ಯಾರೆ ಮತ ಕೇಳಿಕೊಂಡು ಬಂದರೂ ಅವರನ್ನು ಹೊಡೆದು, ಬಡೆದು ಸಾಯಿಸಿ. ನಾಳೆ ನಾನು ಅಧಿಕಾರಕ್ಕೆ ಬಂದ ನಂತರ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಮುನಿರತ್ನ ಅಭಯ ನೀಡಿದ್ದಾರೆ ಎಂದು ಅವರು ದೂರಿದರು.

ಆ ಮೂಲಕ ಕನ್ನಡಿಗ ಹಾಗೂ ಒಕ್ಕಲಿಗ ಹೆಣ್ಣು ಮಗಳ ಮೇಲೆ ಹಲ್ಲೆ ಮಾಡಲು ಸಚಿವರು ಪ್ರಚೋದಿಸಿದ್ದಾರೆ. ಕುಸುಮಾ ಈಗಾಗಲೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಸರಕಾರವಾಗಲಿ, ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುರೇಶ್ ಆರೋಪಿಸಿದರು.

ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ 10 ಕೆಸ್ ಹಾಕಿ ಬಂಧಿಸುತ್ತಾರೆ. ಬೆಂಗಳೂರಿನಲ್ಲಿ ಭಾಷಾ ಸಾಮರಸ್ಯ ಕದಡುವವರ ವಿರುದ್ಧ ಇಷ್ಟು ಹೊತ್ತಿಗೆ ಸುಮೋಟೋ ಪ್ರಕರಣ ದಾಖಲಿಸಿಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದ ಪೊಲೀಸರಿಗೆ ಅದರದೇ ಆದ ಖ್ಯಾತಿ ಇತ್ತು. ಆದರೆ ಇದನ್ನು ಬಿಜೆಪಿ ಸರಕಾರ ನಾಶ ಮಾಡುತ್ತಿದೆ. ಮುನಿರತ್ನ ಬಂಧನಕ್ಕೆ ರಾಜ್ಯಪಾಲ, ಮುಖ್ಯಮಂತ್ರಿ ಸೂಚಿಸಬೇಕು. ಇವರು ಹೊರಗಡೆ ಇದ್ದರೆ ಸಮಾಜದಲ್ಲಿ ಶಾಂತಿಗೆ ಭಂಗವುಂಟಾಗಲಿದೆ. ಇವರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಕಳುಹಿಸಲಾಗುವುದು ಎಂದು ಸುರೇಶ್ ಹೇಳಿದರು.

Similar News