ಪರ್ಕಳ: ಮೂರು ತಿಂಗಳ ಹಿಂದೆ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು!

Update: 2023-04-01 14:37 GMT

ಪರ್ಕಳ, ಎ.1: ಪರ್ಕಳ ಅರ್ಜುನ ಯುವಕ ಮಂಡಲದಿಂದ ಸರಳೇಬೆಟ್ಟು ಶ್ರೀರಾಮ ಭಜನಾ ಮಂದಿರದವರೆಗೆ ಮೂರು ತಿಂಗಳ ಹಿಂದೆ ನಿರ್ಮಿಸಲಾದ ನೂತನ ಕಾಂಕ್ರಿಟ್ ರಸ್ತೆಯಲ್ಲಿ ಬಿರುಕು ಕಂಡುಬಂದಿದ್ದು, ಕಳಪೆ ಕಾಮಗಾರಿಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ನಗರಸಭೆಯ ನಗರೋತ್ಥಾನದ ಅನುದಾನ 1.60ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಗೊಂಡಿದ್ದು, ಈ ಹೊಸ ರಸ್ತೆ ಮೂರು ತಿಂಗಳಾಗುವ ಮೊದಲೇ ಬಿರುಕು ಬಿಟ್ಟಿದೆ. ಬಿರುಕು ಬಿಟ್ಟ ಜಾಗದಲ್ಲಿ ಪ್ಯಾರ್ಚ್ ವರ್ಕ್ಸ್ ಮಾಡಿದ್ದು, ಇದೀಗ ಆ ಪ್ಯಾಚ್ ವರ್ಕ್ ನಡೆಸಿದ ಸ್ಥಳದಲ್ಲಿಯೂ ಕೂಡ ಬಿರುಕು ಕಂಡುಬಂದಿದೆ.

ಚರಂಡಿ ವ್ಯವಸ್ಥೆ ಇಲ್ಲದೆಯೇ ಹೊಸ ರಸ್ತೆಯನ್ನು ನಿರ್ಮಿಸಲಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಮಳೆಗಾಲ ಬರುವ ನಿರೀಕ್ಷೆಯಲ್ಲಿದೆ. ಈ ವೇಳೆ ಸಾಕಷ್ಟು ಸಮಸ್ಯೆಗಳಾಗುವ ಸಾಧ್ಯತೆ ಇದೆ. ಅದೇ ರೀತಿ ಸಮೀಪದಲ್ಲಿಯೇ ಬಿಎಸ್ಸೆನ್ನೆಲ್ ಟವರ್ ಇದ್ದು, ಇಲ್ಲಿ ಎಲ್ಲಾ ಕೇಬಲ್‌ಗಳು ರಸ್ತೆಯ ಮೇಲೆ ಹಾದು ಹೋಗಿದೆ. ಕುಡಿಯುವ ನೀರಿನ ಪೈಪುಗಳು ಕೂಡ ಪಕ್ಕದಲ್ಲಿ ಕಾಣಸಿಗುತ್ತದೆ. ಇದಕ್ಕೆಲ್ಲ  ಸೂಕ್ತ ರೀತಿ ವ್ಯವಸ್ಥೆಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲಿನ ನೂತನ ಕಾಂಕ್ರೀಟ್ ರಸ್ತೆಯನ್ನು ಸಮಪರ್ಕವಾಗಿ ನಿರ್ಮಿಸಿ, ಸಮಸ್ಯೆ ಪರಿಹರಿಸ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Similar News