ಮಾಹಿತಿ ನೀಡದ ಹಿನ್ನೆಲೆ: ಮಂಡ್ಯ ನಗರಸಭೆ ಅಭಿಯಂತರರಿಗೆ 15 ಸಾವಿರ ರೂ. ದಂಡ

Update: 2023-04-07 14:27 GMT

ಮಂಡ್ಯ, ಎ.7: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರೊಬ್ಬರು ಕೇಳಿದ ಮಾಹಿತಿ ನೀಡದ ಕಾರಣ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರೊಬ್ಬರಿಗೆ ಕರ್ನಾಟಕ ಮಾಹಿತಿ ಆಯೋಗ 15 ಸಾವಿರ ರೂ. ದಂಡ ವಿಧಿಸಿದೆ.

ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಅವರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1)ರನ್ವಯ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಕೆ.ಪಿ.ಮಂಜುನಾಥ್ ಅವರು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಸದರಿ ರವಿಕುಮಾರ್ ಅವರಿಗೆ ವಿಧಿಸಿರುವ ದಂಡದ ಮೊತ್ತವನ್ನು ಅವರ ವೇತನದಿಂದ ಕಡಿತಗೊಳಿಸಿ ಸರಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿ, ಜಮಾ ಮಾಡಿದ ರಶೀದಿಯೊಂದಿಗೆ ವರದಿಯನ್ನು ತನ್ನ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರಿಗೆ ಆದೇಶಿಸಲಾಗಿದೆ.

ಪ್ರಕರಣದ ವಿವರ:

ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 2019ರಿಂದ 2022ರ ಅವಧಿಯಲ್ಲಿ ಮ್ಯಾನ್‍ಹೋಲ್ ದುರಸ್ತಿ ಕಾಮಗಾರಿಗೆ ಸಂಬಂಧಿಸಿದ ವರ್ಕ್ ಆರ್ಡರ್ ಪ್ರತಿ, ಟೆಂಡರ್ ಪ್ರಕ್ರಿಯೆ ದಾಖಲೆ ಪ್ರತಿ, ಗುತ್ತಿಗೆದಾರರ ಮಾಹಿತಿ, ಗುತ್ತಿಗೆದಾರರಿಗೆ ಪಾವತಿಸಿದ ಹಣದ ಮಾಹಿತಿ, ಮ್ಯಾನ್‍ಹೋಲ್‍ಗಳ ಸಂಖ್ಯೆ ಮಾಹಿತಿ ಕೋರಿ ಶಿವರಾಮೇಗೌಡ ಎಂಬುವರು ನಗರಸಭೆ ಮಾಹಿತಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು.

ಆದರೆ, ನಿಗದಿತ ಅವಧಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅರ್ಜಿದಾರ ಶಿವರಾಮೇಗೌಡ ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ಪೌರಾಯುಕ್ತ ಮಂಜುನಾಥ್ ಆರ್. ಅವರಿಗೆ ಮೇಲ್ಮನಿ ಸಲ್ಲಿಸಿದ್ದರು. ಆದರೆ, ಅವರೂ ಕೂಡ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.

ಕರ್ನಾಟಕ ಮಾಹಿತಿ ಆಯೋಗದ ಆದೇಶಕ್ಕೂ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಆಯೋಗದ ಆಯುಕ್ತರು ಸದರಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Similar News