ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಮೋದಿ, ಆದಿತ್ಯನಾಥ್, ಅಮಿತ್ ಶಾ, ನಡ್ಡಾ

Update: 2023-04-18 14:16 GMT

ಉಡುಪಿ, ಎ.18: ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜ್ಯ ಬಿಜೆಪಿ, ಪಕ್ಷದ ಸ್ಟಾರ್ ಪ್ರಚಾರಕರನ್ನು ರಾಜ್ಯಾದ್ಯಂತ ಪ್ರಚಾರದಲ್ಲಿ ಬಳಸಿಕೊಳ್ಳುವ ಯೋಜನೆ ಯನ್ನು ರೂಪಿಸುತ್ತಿದೆ ಎಂದು ಜಿಲ್ಲಾ ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆ.ಪಿ.ನಡ್ಡಾ ಅವರ ತಲಾ 20 ಚುನಾವಣಾ ಪ್ರಚಾರ ಸಭೆಯನ್ನು ರಾಜ್ಯದಲ್ಲಿ ನಡೆಸಲು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇವರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಇವರ ಪ್ರಚಾರ ಸಭೆಗಳನ್ನು ಕರಾವಳಿಯಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆಯನ್ನು ಮೇ ಮೊದಲ ವಾರದಲ್ಲಿ ಮುಲ್ಕಿಯಲ್ಲಿ ಆಯೋಜಿಸುವ ಸಾಧ್ಯತೆ ಇದೆ.

ಪ್ರಧಾನಿ ಅವರ ಕಾರ್ಯಕ್ರಮ ಮೂಡಬಿದ್ರೆ ವಿಧಾನಸಭಾ ವ್ಯಾಪ್ತಿಯಲ್ಲಿ ನಿಗದಿಯಾಗಿದೆ. ಆದರೆ ಸಾರ್ವಜನಿಕ ಸಭೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 7-8 ವಿಧಾನಸಭಾ ಕ್ಷೇತ್ರಗಳನ್ನು ವ್ಯಾಪಿಸುವಂತೆ ಮುಲ್ಕಿಯಲ್ಲಿ ಆಯೋಜಿಸುವ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ ಎಂದು ಮೂಲ ತಿಳಿಸಿದೆ.

ಪ್ರಧಾನಿಯವರು ಬರುವ ವೇಳೆಯೇ ರಾಜ್ಯಕ್ಕಾಗಮಿಸುವ ಆದಿತ್ಯನಾಥ್ ಅವರ ಕಾರ್ಯಕ್ರಮವನ್ನು ಭಟ್ಕಳ, ಕುಂದಾಪುರ, ಬೈಂದೂರುಗಳಲ್ಲಿ ಹಮ್ಮಿಕೊಳ್ಳುವ  ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ. ಆದರೆ ಸ್ಥಳ ಮತ್ತು ದಿನಾಂಕಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ  ಕರ್ನಾಟಕದ ಈ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯಲು ಪಕ್ಷ ಶತಾಯಗತಾಯ ಪ್ರಯತ್ನಿಸುತಿದ್ದು, ಇದನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದೆ. ಬೊಮ್ಮಾಯಿ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿರುವ ಸೂಚನೆ ಇರುವುದರಿಂದ ಹಾಗೂ ಟಿಕೇಟ್ ಹಂಚಿಕೆಯೂ ದೊಡ್ಡ ಮಟ್ಟದ ಅಸಮಧಾನದ ಅಲೆ, ಬಂಡಾಯವನ್ನು ಹುಟ್ಟು ಹಾಕಿರುವುದರಿಂದ ಇವುಗಳನ್ನು ಮೆಟ್ಟಿ ನಿಲ್ಲಲು ಪಕ್ಷ ಮೋದಿ, ಆದಿತ್ಯನಾಥ್, ಅಮಿತ್ ಶಾರನ್ನು ಸಂಪೂರ್ಣವಾಗಿ ನೆಚ್ಚಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ.

ಹೀಗಾಗಿ ಎಪ್ರಿಲ್ ತಿಂಗಳ ಕೊನೆಯ ವಾರ ಹಾಗೂ ಮೇ ಮೊದಲ ವಾರವಿಡೀ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯದ ಬಿರು ಬೇಸಿಗೆಯ ಬಿಸಿಲಿನಲ್ಲಿ ಪಕ್ಷಕ್ಕಾಗಿ ಬೆವರು ಹರಿಸುವ ಕಾರ್ಯಕ್ರಮಗಳ ರೂಪುರೇಷೆಗಳು ಆಯೋಜನೆಗೊಳ್ಳುತ್ತಿವೆ.

Similar News