ನಟ ಮಮ್ಮುಟ್ಟಿ ತಾಯಿ ಫಾತಿಮಾ ಇಸ್ಮಾಯಿಲ್ ನಿಧನ

Update: 2023-04-21 10:12 GMT

ಕೊಚ್ಚಿ: ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ (Mammootty) ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆಯು ಚೆಂಪು ಜುಮಾ ಮಸೀದಿಯಲ್ಲಿ ಇಂದು (ಶುಕ್ರವಾರ) ಸಂಜೆ 4 ಗಂಟೆಗೆ ನೆರವೇರಲಿದೆ. ಮೃತರು ತಮ್ಮ ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ಮಲಯಾಳಂ ಚಿತ್ರರಂಗದ ಗಣ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಶಶಿ ತರೂರ್, "ಮಮ್ಮುಟ್ಟಿ ಅವರೊಂದಿಗೆ ಇಂದು ಬೆಳಗ್ಗೆ ಮಾತನಾಡಿ, ಅವರ ತಾಯಿಯ ನಿಧನಕ್ಕೆ ಸಂತಾಪವನ್ನು ಸೂಚಿಸಿದೆ. ನಾನು ಬೆಳೆದಂತೆಲ್ಲ ನನ್ನ ತಾಯಿಗೆ ಹೆಚ್ಚು ನಿಕಟವಾಗಿದ್ದೆ ಮತ್ತು ಈ ಬದಲಿಸಲಾಗದ ಬಾಂಧವ್ಯದ ಬಗ್ಗೆ ನನಗೆ ಅರಿವಿದೆ. ಅವರಿಗೆ ತಮ್ಮ ನಷ್ಟವನ್ನು ಭರಿಸುವ ಸಮಾಧಾನ ಚಿತ್ತ ಪ್ರಾಪ್ತವಾಗಲಿ" ಎಂದು ಕಂಬನಿ ಮಿಡಿದ್ದಾರೆ.

ಫಾತಿಮಾ ಇಸ್ಮಾಯಿಲ್ ಅವರ ಆರು ಮಕ್ಕಳ ಪೈಕಿ ಮಮ್ಮುಟಿ ಹಿರಿಯ ಪುತ್ರರಾಗಿದ್ದಾರೆ. ಅವರಿಗೆ ಇಬ್ಬರು ಕಿರಿಯ ಸಹೋದರರಾದ ಇಬ್ರಾಹಿಂ ಕುಟ್ಟಿ ಹಾಗೂ ಝಕಾರಿಯಾ, ಮೂವರು ಕಿರಿಯ ಸಹೋದರಿಯರಾದ ಅಮೀನಾ, ಸೌದಾ ಮತ್ತು ಶಫೀನಾ ಸೇರಿ ಒಟ್ಟು ಐದು ಮಂದಿ ಸಹೋದರ, ಸಹೋದರಿಯರಿದ್ದಾರೆ.

Similar News