ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 30ವರ್ಷ ಶಿಕ್ಷೆ

Update: 2023-04-21 16:02 GMT

ದಾವಣಗೆರೆ:  ಪರಿಶಿಷ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ  ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ತಿಪ್ಪೇಶನಿಗೆ ದಾವಣಗೆರೆಯ ಮಕ್ಕಳ ಸ್ನೇಹಿ ಮತ್ತು ಎಫ್.ಟಿ.ಎಸ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ  ಶ್ರೀಪಾದ.ಎನ್.ಅವರು ಆರೋಪಿಗೆ 30ವರ್ಷ ಶಿಕ್ಷೆ ಹಾಗೂ 70,000 ದಂಡ ವಿಧಿಸಿದ್ದಾರೆ. ಅಲ್ಲದೇ ಸಂತ್ರಸ್ಥೆಗೆ ರೂ 6.50.000 ಪರಿಹಾರ ನೀಡಲು ಆದೇಶಿಸಿದ್ದಾರೆ. 

ಘಟನೆ ಹಿನ್ನೆಲೆ: ಆರೋಪಿ ಹರಿಹರದಲ್ಲಿ ಹೊಸದಾಗಿ ಕಟ್ಟಿಸುತ್ತಿರುವ ಮನೆ ಹತ್ತಿರ ಸಂತ್ರಸ್ತೆಗೆ ಕರೆದು ಚಾಕಲೇಟ್, ಕಬ್ಬಿನ ಹಾಲು, ಐಸ್ ಕ್ರೀಂ ನೀಡುತ್ತಿದ್ದ ಎಂದು ಹೇಳಲಾಗಿದೆ. ಹಾಗೇ ಪರಿಚಯ ಮಾಡಿಕೊಂಡು 19-04-2019ರ ಸಂಜೆ 5-30ರ ಸುಮಾರಿಗೆ ತಾನು ಕಟ್ಟುತ್ತಿರುವ ಮನೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆಂದು ಆರೋಪಿಸಲಾಗಿತ್ತು.

ಸಂತ್ರಸ್ತೆ ಕುಟುಂಬದವರು ನೀಡಿದ ದೂರಿನ ಮೇಲೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಗಿನ ತನಿಖಾಧಿಕಾರಿಗಳಾದ ಎಂ.ಕೆ.ಗಂಗಲ್ ಡಿವೈಎಸ್ಪಿ ಅವರು ಪ್ರಕರಣದ ತನಿಖೆ ಮಾಡಿ ಆರೋಪಿತನ ವಿರುದ್ಧ ದೋಷ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ದಾವಣಗೆರೆಯ ಮಕ್ಕಳ ಸ್ನೇಹಿ ಮತ್ತು ಎಫ್.ಟಿ.ಎಸ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ  ಶ್ರೀಪಾದ.ಎನ್.ಅವರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. 

ಸರ್ಕಾರಿ ಅಭಿಯೋಜಕರಾದ ಶ್ರೀ ಜಯಪ್ಪ.ಕೆ.ಜಿ,ಯವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

Similar News