ಆಪ್ ಸಂಸದನಿಂದ ಈಡಿ ಅಧಿಕಾರಿಗಳಿಗೆ ಕಾನೂನು ನೋಟಿಸ್ ಜಾರಿ: ಕ್ಷಮೆ ಯಾಚಿಸಲು ಆಗ್ರಹ

Update: 2023-04-23 10:48 GMT

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಸುಳ್ಳು ಹಾಗೂ ತೇಜೋವಧೆಗೊಳಿಸುವಂತಹ ಆರೋಪಗಳನ್ನು ಮಾಡುತ್ತಿರುವುದಕ್ಕೆ 48 ಗಂಟೆಗಳೊಳಗೆ ಕ್ಷಮೆ ಯಾಚಿಸಬೇಕು ಇಲ್ಲವೆ ಸಿವಿಲ್ ಮತ್ತು ಕ್ರಿಮಿನಲ್ ಮಾನಹಾನಿ ಪ್ರಕರಣಗಳನ್ನು ಎದುರಿಸಬೇಕು ಎಂದು ಎಚ್ಚರಿಸಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಜಾರಿ ನಿರ್ದೇಶನಾಲಯಕ್ಕೆ (ಈಡಿ)  ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು thehindu.com ವರದಿ ಮಾಡಿದೆ.

ಜಾರಿ ನಿರ್ದೇಶನಾಲಯದ ನಿರ್ದೇಶಕ ಕುಮಾರ್ ಮಿಶ್ರಾ ಹಾಗೂ ಜಂಟಿ ನಿರ್ದೇಶಕ ಜೋಗೇಂದರ್ ಅವರನ್ನು ಉಲ್ಲೇಖಿಸಿ ಜಾರಿಗೊಳಿಸಲಾಗಿರುವ ನೋಟಿಸ್‌ನಲ್ಲಿ, ಅಧಿಕಾರಿಗಳು ಅರಿವಿದ್ದೂ ಮತ್ತು ಉದ್ದೇಶಪೂರ್ವಕವಾಗಿ ಸಂಸದರ ವಿರುದ್ಧ ಸುಳ್ಳು, ಮಾನಹಾನಿಕಾರಕ ಹಾಗೂ ತೇಜೋವಧೆಗೊಳಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ನಿಷ್ಪಕ್ಷಪಾತವಾಗಿ ವರ್ತಿಸಬೇಕಾದ ಜಾರಿ ನಿರ್ದೇಶನಾಲಯದಂಥ ಸಂಸ್ಥೆಯೊಂದು ತಮ್ಮ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ತೀವ್ರ ವಿಷಾದನೀಯ ಎಂದು ಸಂಜಯ್ ಸಿಂಗ್ ತಮ್ಮ ನೋಟಿಸ್‌ನಲ್ಲಿ ಪ್ರತಿಪಾದಿಸಿದ್ದಾರೆ.

"ನಾನು ಇಂತಹ ಚಾರಿತ್ರ್ಯಹರಣವನ್ನು ಸಹಿಸುವುದಿಲ್ಲ ಮತ್ತು ಇದಕ್ಕೆ ಹೊಣೆಗಾರರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಣಯಿಸಿದ್ದೇನೆ" ಎಂದೂ ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ.

ಅಬಕಾರಿ ನೀತಿಯಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ತಿರುಚಿದ, ಸುಳ್ಳಿನ, ಪ್ರಚೋದಿತ, ಕ್ರೂರ, ತೇಜೋವಧೆಯ ಹಾಗೂ ನಿರಾಧಾರ ಆರೋಪವನ್ನು ಜನಪ್ರಿಯಗೊಳಿಸಲು ಅಥವಾ ಆಪ್ ನಾಯಕನ ಸಾರ್ವಜನಿಕ ವ್ಯಕ್ತಿತ್ವಕ್ಕೆ ಹಾನಿಯೆಸಗಲು ಮತ್ತು ವಿಕೃತಗೊಳಿಸಲು ಜಾರಿ ನಿರ್ದೇಶನಾಲಯದ ಸಹವರ್ತಿಗಳು, ಏಜೆಂಟ್‌ಗಳು ಹಾಗೂ ಉದ್ಯೋಗಿಗಳು ಪ್ರಯತ್ನಿಸಿದ್ದಾರೆ ಎಂದೂ ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ಸದ್ಯ ಕೈಬಿಡಲಾಗಿರುವ 2022ರ ದಿಲ್ಲಿ ಅಬಕಾರಿ ನೀತಿ ನಿರೂಪಣೆ ಹಾಗೂ ಜಾರಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಬಿಐ ಪ್ರಾಥಮಿಕ ವರದಿ ದಾಖಲಿಸಿಕೊಂಡಿತ್ತು. ಸಿಬಿಐನ ಪ್ರಕರಣವನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿದ್ದು, ಈವರೆಗೆ ಒಂಬತ್ತು ಮಂದಿಯನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಈವರೆಗೆ ಮೂರು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ.

Similar News