ವಿಶ್ವಬ್ಯಾಂಕ್ ನ ಸಾಗಣೆ ನಿರ್ವಹಣಾ ಸೂಚ್ಯಂಕದಲ್ಲಿ ಭಾರತಕ್ಕೆ 38ನೇ ರ‍್ಯಾಂಕ್‌

Update: 2023-04-23 16:04 GMT

ಹೊಸದಿಲ್ಲಿ, ಎ.23: ವಿಶ್ವಬ್ಯಾಂಕ್ ಪ್ರಕಟಿಸಿರುವ ಜಾಗತಿಕ ಲಾಜಿಸ್ಟಿಕ್ (ಸಾಗಣಿಕೆ,ಸರಬರಾಜು) ನಿರ್ವಹಣಾ ಸೂಚ್ಯಂಕ (ಎಲ್ಪಿಐ) 2023ರಲ್ಲಿ ಭಾರತವು ಆರು ಸ್ಥಾನಗಳಷ್ಟು ಮೇಲೇರಿದೆ. 139 ದೇಶಗಳನ್ನು ಒಳಗೊಂಡ ಈ ಸೂಚ್ಯಂಕದಲ್ಲಿ ಭಾರತದ ರ್ಯಾಂಕಿಂಗ್ 38 ಆಗಿದೆೆ. ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಹೂಡಿಕೆಯು ಭಾರತದ ರ‍್ಯಾಂಕಿಂಗ್ ಪ್ರಗತಿಗೆ ಕಾರಣವೆಂದು ವರದಿ ತಿಳಿಸಿದೆ.

2018ರ ಸೂಚ್ಯಂಕದಲ್ಲಿ ಭಾರತದ ರ‍್ಯಾಂಕಿಂಗ್ 44 ಆಗಿದ್ದರೆ, 2023ರ ಪಟ್ಟಿಯಲ್ಲಿ 38ಕ್ಕೇರಿದೆ. 2014ರಲ್ಲಿ ಭಾರತದ ಎಲ್ಪಿಐ ರ್ಯಾಂಕಿಂಗ್ 54 ಆಗಿತ್ತು. ಆವಾಗಿನಿಂದ ಲಾಜಿಸ್ಟಿಕ್ ವಲಯದಲ್ಲಿ ಭಾರತದ ನಿರ್ವಹಣೆಯು ಗಣನೀಯವಾಗಿ ಸುಧಾರಣೆಯನ್ನು ಕಾಣುತ್ತಲೇ ಬಂದಿದೆ.

2024-25ರಲ್ಲಿ ಸಾಗಾಟ ವೆಚ್ಚವನ್ನು ಕಡಿಮೆಗೊಳಿಸಲು ಹಾಗೂ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ  ಬಹುಮಾದರಿ ಸಂಪರ್ಕಶೀಲತೆಯ ಕುರಿತಾದ ರಾಷ್ಟ್ರೀಯ ಯೋಜನೆಯಾದ  ಪಿಎಂ ಗತಿಶಕ್ತಿ ಉಪಕ್ರಮವನ್ನು  ಪ್ರಧಾನಿ ನರೇಂದ್ರ ಮೋದಿ ಸರಕಾರವು  2021ರ ಆಕ್ಟೋಬರ್ನಲ್ಲಿ ಘೋಷಿಸಿತ್ತು.

2018ರಲ್ಲಿ 52ರಷ್ಟಿದ್ದ ಮೂಲಸೌಕರ್ಯದ ಅಂಕವು 2023ರಲ್ಲಿ 47ಕ್ಕೇರಿದ್ದು, ಐದು  ಸ್ಥಾನಗಳಷ್ಟು ಏರಿಕೆ ಕಂಡಿದೆ. 2018ರಲ್ಲಿ ಅಂತಾರಾಷ್ಟ್ರೀಯ ಹಡಗು ಸಾಗಣಿಕೆಯಲ್ಲಿ 44ನೇ ಸ್ಥಾನದಲ್ಲಿದ್ದ ಭಾರತದ ರ್ಯಾಂಕಿಂಗ್ 2023ರಲ್ಲಿ 22ಕ್ಕೇರಿದೆ.  ಸಾಗಣಿಕೆಯಲ್ಲಿನ ದಕ್ಷತೆ ಹಾಗೂ ಸಮಾನತೆಯಲ್ಲಿ  ಅದು ನಾಲ್ಕು ಸ್ಥಾನಗಳಷ್ಟು ಮೇಲೇರಿದ್ದು,  48ನೇ ಸ್ಥಾನದಲ್ಲಿದೆ.

ಸಾಗಾಣಿಕೆಯಲ್ಲಿನ  ಸಮಯಕ್ಲಪ್ತತೆಯ (ಟೈಮ್ಲೈನ್) ರ್ಯಾಂಕಿಂಗ್ನಲ್ಲಿ ಭಾರತವು 17 ಸ್ಥಾನಗಳಷ್ಟು ಜಿಗಿತವನ್ನು ಕಂಡಿದೆ.  ಸಾಗಣಿಕೆಯ ಟ್ರ್ಯಾಕಿಂಗ್  ಹಾಗೂ ಟ್ರೇಸಿಂಗ್(ನಕ್ಷೆ ಗುರುತಿಸುವಿಕೆ)ನಲ್ಲಿ ಭಾರತದ ರ್ಯಾಂಕಿಂಗ್ 38ನೇ ಸ್ಥಾನದಲ್ಲಿದ್ದು ಮೂರು ರ್ಯಾಂಕ್ಗಳಷ್ಟು ಏರಿಕೆಯನ್ನು ಕಂಡಿದೆ. ಸಾಗಣಿಕೆ ವ್ಯವಸ್ಥೆಯ ಆಧುನೀಕರಣ ಹಾಗೂ ಡಿಜಿಟಲೀಕರಣವು ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳ ಬೆಳವಣಿಗೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ಭಾರತ ಹಾಗೂ  ಸಿಂಗಾಪುರದಲ್ಲಿ 2022ರ ಮೇ ಹಾಗೂ ಆಕ್ಟೋಬರ್ ತಿಂಗಳ ನಡುವೆ ಕಂಟೈನರ್ಗಳ ಸರಾಸರಿ ವಾಸ್ತವ್ಯ ಅವಧಿಯು ಮೂರು ದಿನಗಳಾಗಿದ್ದರೆ, ಅಮೆರಿಕದಲ್ಲಿ ಅದು ಏಳು ದಿನ ಮತ್ತು ಜರ್ಮನಿಯಲ್ಲಿ ಹತ್ತು ದಿನಗಳಾಗಿವೆ ಎಂದು ವರದಿ ತಿಳಿಸಿದೆ.

Similar News