ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಉದ್ದೇಶ: ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್

Update: 2023-04-24 09:58 GMT

ಕೋಲ್ಕತ್ತಾ: ಕಾಂಗ್ರೆಸ್ ಮೇಲೆ ಪ್ರೀತಿ ಇಲ್ಲದ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಕೋಲ್ಕತ್ತಾದ ಪಶ್ಚಿಮ ಬಂಗಾಳ ರಾಜ್ಯ ಸಚಿವಾಲಯಕ್ಕೆ ಆಗಮಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು. ನಿತೀಶ್ ಅವರು  ಬಿಜೆಪಿ ವಿರುದ್ಧ ಮಹಾಮೈತ್ರಿಕೂಟವನ್ನು ರಚಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಮಮತಾ ಅವರ ಭೇಟಿಯ ಸಂದರ್ಭ ಬಿಹಾರದ ಉಪ ಮುಖ್ಯಮಂತ್ರಿ, ಆರ್‌ಜೆಡಿಯ ತೇಜಸ್ವಿ ಯಾದವ್ ಕೂಡ ಈ ವೇಳೆ ನಿತೀಶ್ ಕುಮಾರ್ ಅವರೊಂದಿಗೆ ಇದ್ದರು.

 ನಂತರ ಈ ಇಬ್ಬರು ನಾಯಕರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಲಕ್ನೋಗೆ ತೆರಳಲಿದ್ದಾರೆ. ತೃಣಮೂಲ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ( ಎಸ್‌ಪಿ) ಎರಡೂ ಕಾಂಗ್ರೆಸ್  ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು  ಉತ್ಸುಕರಾಗಿಲ್ಲ.

ಲೋಕಸಭೆಯ ಸಂಸದರಾಗಿ ರಾಹುಲ್ ಗಾಂಧಿಯ ಅನರ್ಹತೆ ವಿಚಾರವು ಇತ್ತೀಚೆಗೆ ವಿರೋಧ ಪಕ್ಷಗಳಲ್ಲಿ ಅಪರೂಪದ ಒಗ್ಗಟ್ಟಿನ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿತು.

ಆ ನಂತರ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ , ನಿತೀಶ್ ಕುಮಾರ್ ಹಾಗೂ  ತೇಜಸ್ವಿ ಯಾದವ್ ನಡುವಿನ ಸಭೆಯೊಂದಿಗೆ ವೇಗವನ್ನು ಪಡೆದುಕೊಂಡಿತು.

 ನಿತೀಶ್ ಕುಮಾರ್ ಅವರು ಕಾಂಗ್ರೆಸ್‌ನ ಕಟು ಟೀಕಾಕಾರರಲ್ಲಿ ಒಬ್ಬರಾಗಿರುವ ದಿಲ್ಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದಾರೆ,  ಇಡೀ ಪ್ರತಿಪಕ್ಷಗಳು ಹಾಗೂ  ದೇಶವು ಒಗ್ಗೂಡಿ ಕೇಂದ್ರದಲ್ಲಿ ಸರಕಾರವನ್ನು ಬದಲಾಯಿಸುವುದು "ಅತ್ಯಂತ ಅಗತ್ಯ" ಎಂದು ಕೇಜ್ರಿವಾಲ್ ಒಪ್ಪಿಕೊಂಡಿದ್ದಾರೆ .

Similar News