ತಮ್ಮ ಮುಂದಿರುವ ಪ್ರಕರಣಗಳ ಕುರಿತು ನ್ಯಾಯಾಧೀಶರು ಮಾದ್ಯಮಗಳಿಗೆ ಸಂದರ್ಶನ ನೀಡಬಾರದು: ಸುಪ್ರೀಂ ಕೋರ್ಟ್‌

Update: 2023-04-24 11:14 GMT

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಬ್ಯಾನರ್ಜಿ ಅವರ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿರುವ ಕೊಲ್ಕತ್ತಾ ಹೈಕೋರ್ಟ್‌ ನ್ಯಾಯಾಧೀಶ ಅಭಿಜಿತ್‌ ಗಂಗೋಪಾಧ್ಯಾಯ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಟಿವಿ ಸಂದರ್ಶನಗಳನ್ನು ನ್ಯಾಯಾಧೀಶರು ನೀಡುವುದು ಸರಿಯಲ್ಲ, ಆದರೆ ನ್ಯಾಯಾಧೀಶರೊಬ್ಬರು ಸಂದರ್ಶನ ನೀಡಿದರೆ ನಂತರ ಅವರು ಆ ನಿರ್ದಿಷ್ಟ ಪ್ರಕರಣದ ವಿಚಾರಣೆ ನಡೆಸುವ ಹಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ ಎಸ್‌ ನರಸಿಂಹ ಅವರ ಪೀಠ ಹೇಳಿದೆ.

ಈ ನಿರ್ದಿಷ್ಟ ಪ್ರಕರಣ ಕುರಿತಂತೆ ಕೊಲ್ಕತ್ತ ಹೈಕೋರ್ಟಿನಿಂದ ಸುಪ್ರೀಂ ಕೋರ್ಟ್‌ ವರದಿ ಕೇಳಿದೆ.

ನ್ಯಾಯಮೂರ್ತಿ ಗಂಗೋಪಾಧ್ಯಯ ಅವರನ್ನು ಸುಮನ್‌ ಡೇ ಸಂದರ್ಶನ ಮಾಡಿದ್ದರೇ ಎಂಬುದನ್ನು ಪರಿಶೀಲಿಸುವಂತೆ ಕೊಲ್ಕತ್ತಾ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸೂಚಿಸಿ ಶುಕ್ರವಾರದೊಳಗೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸ್ಪಷ್ಟೀಕರಣದೊಂದಿಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದೇ ಆದಲ್ಲಿ ಅವರು ಈ ಪ್ರಕರಣ ವಿಚಾರಣೆ ನಡೆಸುವ ಹಾಗಿಲ್ಲ ಮತ್ತು ಬೇರೊಂದು ಪೀಠ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಿಬಿಐ ಮತ್ತು ಈಡಿ ತನಿಖೆಗೆ ಸೂಚಿಸಿ ಕೊಲ್ಕತ್ತಾ ಹೈಕೋರ್ಟ್‌ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಬ್ಯಾನರ್ಜಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿತ್ತು. ಈ ಸಂದರ್ಭ ನ್ಯಾಯಾಧೀಶರು ನೀಡಿದ್ದ ಸಂದರ್ಶನದ ಟ್ರಾನ್ಸ್‌ಕ್ರಿಪ್ಟ್‌ ಅನ್ನು ಅರ್ಜಿದಾರರು ನ್ಯಾಯಾಲಯದ ಮುಂದೆ ಇರಿಸಿದ್ದರು.

ಪಶ್ಚಿಮ ಬಂಗಾಳದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಶಿಕ್ಷಕೇತರರ ನೇಮಕಾತಿಗೆ ಸಂಬಂಧಿಸಿದ ಅವ್ಯವಹಾರಗಳಲ್ಲಿ ಬ್ಯಾನರ್ಜಿ ಅವರ ಪಾತ್ರವಿದೆಯೆಂಬ ಆರೋಪ ಕುರಿತಂತೆ ಕೇಂದ್ರೀಯ ಏಜನ್ಸಿಗಳಿಂದ ತನಿಖೆಗೆ ಆದೇಶಿಸಿ ಎಪ್ರಿಲ್‌ 13 ರಂದು ಕೊಲ್ಕತ್ತಾ ಹೈಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಅದಾಗಲೇ ತಡೆಯಾಜ್ಞೆ ವಿಧಿಸಿದೆ.

ತನಿಖೆಗೆ ಆದೇಶಿಸಿ ತೀರ್ಪು ನೀಡಿದ ಜಸ್ಟಿಸ್‌ ಗಂಗೋಪಾಧ್ಯಾಯ ಅವರು ಕಳೆದ ಸೆಪ್ಟೆಂಬರಿನಲ್ಲಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ತಮಗೆ ಅಭಿಷೇಕ್‌ ಬ್ಯಾನರ್ಜಿ ಮೇಲಿದ್ದ ಅಸಮಾಧಾನವನ್ನು ಹೊರಹಾಕಿದ್ದರು.  

Similar News