ಸುಡಾನ್‌ನಿಂದ ಭಾರತೀಯರನ್ನು ಕರೆತರಲು ‘ಆಪರೇಶನ್ ಕಾವೇರಿ’

Update: 2023-04-24 16:38 GMT

ಹೊಸದಿಲ್ಲಿ, ಎ. 24: ಯುದ್ಧಪೀಡಿತ ಸುಡಾನ್ ನಿಂದ ಭಾರತೀಯರನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ರವಿವಾರ ಹೇಳಿದ್ದಾರೆ. ‘ಆಪರೇಶನ್ ಕಾವೇರಿ’ ಎಂಬ ಹೆಸರಿನ ಕಾರ್ಯಾಚರಣೆಯಲ್ಲಿ ಸುಮಾರು 500 ಭಾರತೀಯರನ್ನು ಸುಡಾನ್ ಬಂದರಿಗೆ ಕರೆತರಲಾಗಿದೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.  

‘‘ಸುಡಾನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ನಮ್ಮ ನಾಗರಿಕರನ್ನು ಕರೆ ತರಲು ‘ಆಪರೇಶನ್ ಕಾವೇರಿ’ ಚಾಲ್ತಿಯಲ್ಲಿದೆ. ಸುಮಾರು 500 ಭಾರತೀಯರು ಸುಡಾನ್ ಬಂದರು ತಲುಪಿದ್ದಾರೆ. ಇನ್ನೂ ಹಲವು ಅಲ್ಲಿಗೆ ಬರುತ್ತಿದ್ದಾರೆ. ನಮ್ಮ ಹಡಗುಗಳು ಮತ್ತು ವಿಮಾನಗಳು ಅವರನ್ನು ವಾಪಸ್ ಕರೆತರಲು ಸಿದ್ಧವಾಗಿವೆ. ಸುಡಾನ್ನಲ್ಲಿರುವ ಎಲ್ಲಾ ಸಹೋದರರಿಗೆ ನೆರವು ನೀಡಲು ಬದ್ಧರಾಗಿದ್ದೇವೆ’’ ಎಂದು ಜೈಶಂಕರ್ ಟ್ವೀಟ್ ನಲ್ಲಿ ಹೇಳಿದ್ದಾರೆ.

ಭಾರತೀಯರನ್ನು ಸುಡಾನ್ ನಿಂದ ತೆರವುಗೊಳಿಸುವುದಕ್ಕಾಗಿ ವಾಯು ಪಡೆಯ ಸಿ-130ಜೆ ವಿಮಾನಗಳು ಜಿದ್ದಾದಲ್ಲಿ ಸಿದ್ಧವಾಗಿವೆ ಮತ್ತು ಐಎನ್ಎಸ್ ಸುಮೇಧಾ ಸುಡಾನ್ ಬಂದರನ್ನು ತಲುಪಿದೆ ಎಂದು ಭಾರತ ರವಿವಾರ ಘೋಷಿಸಿತ್ತು.

ಶನಿವಾರ ವಿವಿಧ ದೇಶಗಳ 150ಕ್ಕೂ ಅಧಿಕ ಮಂದಿ ಸೌದಿ ಅರೇಬಿಯ ತಲುಪಿದ್ದರು. ಇದರಲ್ಲಿ ಸೌದಿ ರಾಷ್ಟ್ರೀಯರಲ್ಲದೆ, ಭಾರತ ಸೇರಿದಂತೆ ಇತರ 12 ದೇಶಗಳ ನಾಗರಿಕರಿದ್ದಾರೆ. ಆ ಪೈಕಿ ಮೂವರು ಭಾರತೀಯರು. ಅವರು ಸೌದಿ ಅರೇಬಿಯ ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವಾರ ಯುದ್ಧ ಆರಂಭಗೊಳ್ಳುತ್ತಿದ್ದಂತೆಯೇ ಸೌದಿ ಅರೇಬಿಯದ ಈ ವಿಮಾನದ ಮೇಲೆ ಗುಂಡು ಹಾರಿಸಲಾಗಿತ್ತು.

ಸೋಮವಾರ, ಫ್ರಾನ್ಸ್, ಭಾರತ ಸೇರಿದಂತೆ 28 ದೇಶಗಳ 388 ಮಂದಿಯನ್ನು ತೆರವುಗೊಳಿಸಿತು.

‘‘ಫ್ರೆಂಚ್ ತೆರವು ಕಾರ್ಯಾಚರಣೆ ಸಾಗುತ್ತಿದೆ. ಕಳೆದ ರಾತ್ರಿ, ಸೇನಾ ವಿಮಾನವೊಂದು ಎರಡು ಬಾರಿ ಹಾರಾಟ ನಡೆಸಿ ಭಾರತ ಸೇರಿದಂತೆ 28 ದೇಶಗಳ 388 ಮಂದಿಯನ್ನು ಸುಡಾನ್ನಿಂದ ತೆರವುಗೊಳಿಸಿತು’’ ಎಂದು ಭಾರತದಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಸುಡಾನ್ ನಲ್ಲಿ ಎಪ್ರಿಲ್ 15ರಂದು ಸೇನಾ ಮುಖ್ಯಸ್ಥ ಅಬ್ದುಲ್ ಫತ್ತಾಹ್ ಅಲ್-ಬುರ್ಹಾನ್ಗೆ ನಿಷ್ಠವಾಗಿರುವ ಪಡೆಗಳು ಮತ್ತು ಅವರ ಸಹಾಯಕ ಮುಹಮ್ಮದ್ ಹಮ್ದಾನ್ ಡಾಗ್ಲೊಗೆ ನಿಷ್ಠವಾಗಿರುವ ಪಡೆಗಳ ನಡುವೆ ಸಂಘರ್ಷ ಸ್ಫೋಟಿಸಿದೆ.

ಅವರಿಬ್ಬರು 2021ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ ಸುಡಾನ್ನ ಅಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಅಧಿಕಾರಕ್ಕಾಗಿ ಅವರ ನಡುವೆ ತೀವ್ರ ಸಂಘರ್ಷ ಆರಂಭವಾಯಿತು.

Similar News