ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಕುಡುಕನ ಬಂಧನ

Update: 2023-04-24 17:00 GMT

ಹೊಸದಿಲ್ಲಿ,ಎ.24: ನ್ಯೂಯಾರ್ಕ್‌ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಆರೋಪದಲ್ಲಿ ಭಾರತೀಯ ವ್ಯಕ್ತಿಯೋರ್ವನನ್ನು ಸೋಮವಾರ ಬಂಧಿಸಲಾಗಿದೆ.

ಆರೋಪಿಯು ಮದ್ಯದ ಅಮಲಿನಲ್ಲಿದ್ದ ಮತ್ತು ಸಹಪ್ರಯಾಣಿಕನೊಂದಿಗೆ ವಾಗ್ವಾದದ ಸಂದರ್ಭದಲ್ಲಿ ಆತನ ಮೇಲೆ ಮೂತ್ರ ವಿಸರ್ಜಿಸಿದ್ದ ಎಂದು ಅಧಿಕೃತ ಮೂಲಗಳು ತಿಳಿಸಿದವು.

ವಿಮಾನವು ರವಿವಾರ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಸಿಐಎಸ್‌ಎಫ್ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದರು. ವಿಮಾನವು ಇಳಿಯುವ ಮುನ್ನ ಅಮೆರಿಕನ್ ಏರಲೈನ್ಸ್ ದಿಲ್ಲಿ ವಿಮಾನ ನಿಲ್ದಾಣಕ್ಕೆ ಘಟನೆಯ ಮಾಹಿತಿಯನ್ನು ನೀಡಿತ್ತು.

ಬಳಿಕ ಘಟನೆಯಲ್ಲಿ ಭಾಗಿಯಾಗಿದ್ದ ಇಬ್ಬರೂ ಪ್ರಯಾಣಿಕರನ್ನು ದಿಲ್ಲಿ ಪೋಲಿಸರಿಗೆ ಹಸ್ತಾಂತರಿಸಲಾಗಿತ್ತು. ಸಂತ್ರಸ್ತ ಪ್ರಯಾಣಿಕ ದಿಲ್ಲಿ ಪೊಲೀಸರಿಗೆ ವಿಧ್ಯುಕ್ತ ದೂರು ಸಲ್ಲಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಿಕರು ಮದ್ಯಪಾನ ಮಾಡಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸುವ ಘಟನೆಗಳು ಹೆಚ್ಚುತ್ತಿವೆ. ಕಳೆದ ವರ್ಷದ ನವಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ್ದ ಏರ್‌ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಮದ್ಯಪಾನಿ ಪ್ರಯಾಣಿಕನೋರ್ವ ಸಹಪ್ರಯಾಣಿಕರಾಗಿದ್ದ ವೃದ್ಧೆಯ ಮೇಲೆ ಮೂತ್ರ ವಿಸರ್ಜಿಸಿದ್ದ.

ಇಂತಹ ಎರಡನೇ ಘಟನೆಯು ಕಳೆದ ವರ್ಷದ ಡಿ.6ರಂದು ಪ್ಯಾರಿಸ್‌ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ನಡೆದಿತ್ತು.

Similar News