ಸರಕಾರವು ಲೋಕಸಭೆಯ ಬಲವನ್ನು 848ಕ್ಕೆ ಹೆಚ್ಚಿಸುವ ಸಾಧ್ಯತೆ: ವರದಿ

Update: 2023-04-25 13:26 GMT

ಹೊಸದಿಲ್ಲಿ: ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶ ಎಂಬ ಭಾರತದ ಹೊಸ ಸ್ಥಾನಮಾನ ಮತ್ತು ಲೋಕಸಭೆಯಲ್ಲಿ 888 ಆಸನ ಸಾಮರ್ಥ್ಯದೊಂದಿಗೆ ನೂತನ ಸಂಸತ್ ಕಟ್ಟಡದ ನಿರ್ಮಾಣ ಲೋಕಸಭೆಯಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಹೊಸ ಕ್ಷೇತ್ರ ಪುನರ್ವಿಂಗಡಣೆ ಆಯೋಗದ ಸ್ಥಾಪನೆಯ ಮೇಲೆ ಮತ್ತೊಮ್ಮೆ ಗಮನ ಕೇಂದ್ರೀಕೃತವಾಗುವಂತೆ ಮಾಡಿವೆ ಎಂದು newindianexpress.com ವರದಿ ಮಾಡಿದೆ.

ಈ ಹಿಂದೆ 1973ರ 31ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸ್ಥಾನ ಪರಿಷ್ಕರಣೆಯನ್ನು ನಡೆಸಲಾಗಿತ್ತು ಮತ್ತು ಲೋಕಸಭಾ ಸ್ಥಾನಗಳನ್ನು 524ರಿಂದ 545ಕ್ಕೆ ಹೆಚ್ಚಿಸಲಾಗಿತ್ತು. 1976ರಲ್ಲಿ ಮುಂದಿನ 25 ವರ್ಷಗಳ ಕಾಲ ಲೋಕಸಭೆಯ ಬಲವನ್ನು ಸ್ತಂಭನಗೊಳಿಸಲು ನಿರ್ಧರಿಸಲಾಗಿತ್ತು. 2001ರಲ್ಲಿ ಇನ್ನೂ 25 ವರ್ಷಗಳ ಕಾಲ ಲೋಕಸಭೆ ಸದಸ್ಯರ ಸಂಖ್ಯೆಯನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿತ್ತು. 2026ರಲ್ಲಿ ಹೊಸ ಕ್ಷೇತ್ರ ಪುನರ್ವಿಂಗಡಣೆ ಆಯೋಗ ರಚನೆಯಾಗಬೇಕಿದ್ದು, ಆ ಪ್ರಕ್ರಿಯೆ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕುಟುಂಬ ಯೋಜನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಮತ್ತು ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿರುವ ರಾಜ್ಯಗಳಿಗೆ ಸ್ಥಾನಗಳ ಮರುಹಂಚಿಕೆಯಲ್ಲಿ ಅನನುಕೂಲವಾಗದಂತೆ ನೋಡಿಕೊಳ್ಳುವುದು ಸರಕಾರದ ಮುಂದಿರುವ ಸವಾಲು ಆಗಲಿದೆ. ದೇಶಾದ್ಯಂತ ಕ್ಷೇತ್ರಗಳಿಗೆ ಸಮಾನ ಘಟಕಗಳನ್ನು ಕಡ್ಡಾಯಗೊಳಿಸಿರುವ ಸಂವಿಧಾನದ ವಿಧಿ 81ನ್ನು ಸರಕಾರವು ತಿದ್ದುಪಡಿ ಮಾಡಬೇಕಾಗುತ್ತದೆ ಮತ್ತು ರಾಜ್ಯಗಳ ನಡುವೆ ಸ್ಥಾನಗಳ ಮರುಹಂಚಿಕೆಗಾಗಿ ಹೊಸ ಸೂತ್ರವನ್ನು ರೂಪಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಹಳೆಯ ಸೂತ್ರದ ಪ್ರಕಾರ ಸ್ಥಾನಗಳನ್ನು ಹಂಚಿಕೆ ಮಾಡಿದರೆ ಲೋಕಸಭಾ ಸ್ಥಾನಗಳ ಸಂಖ್ಯೆ 848ಕ್ಕೇರುವ ಸಾಧ್ಯತೆಯಿದ್ದು, ಉತ್ತರ ಪ್ರದೇಶವು 143 ಸ್ಥಾನಗಳನ್ನು ಪಡೆಯಲಿದೆ ಮತ್ತು ಕೇರಳವು ಈಗಿನ 20 ಸ್ಥಾನಗಳಲ್ಲಿಯೇ ಉಳಿದುಕೊಳ್ಳಲಿದೆ ಎಂದು ವರದಿಯಾಗಿದೆ.

Similar News